
ಮುದ್ದೇಬಿಹಾಳ : ಪಟ್ಟಣದಲ್ಲಿರುವ ದೊಡ್ಡ ಕೆರೆಯನ್ನು ಪುನಃಶ್ಚೇತನಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಟಿ. ಭೂಬಾಲನ್ ಹೇಳಿದರು.

ಪಟ್ಟಣದಲ್ಲಿರುವ ವಿವಿಧ ಸ್ಥಳಗಳಿಗೆ ಭೇಟಿ ನೀಡಿದ ಬಳಿಕ ತಹಶೀಲ್ದಾರ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಕೆರೆ ಮುಂಚೆ ಗಲೀಜಾಗಿತ್ತು. ಸದ್ಯಕ್ಕೆ ಸ್ವಲ್ಪ ಶುಚಿಯಾಗಿದೆ. ಆದರೆ ಕೊಳಚೆ ನೀರು ನೇರವಾಗಿ ಕೆರೆಗೆ ಹರಿಸದಂತೆ ಕ್ರಮ ಜರುಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ. ಎರಡು ತಿಂಗಳ ಅವಧಿಯಲ್ಲಿ ಕೆರೆಯನ್ನು ಪುನಃಶ್ಚೇತನಗೊಳಿಸಲಾಗುವುದು. ಕೆರೆಯ ಶುಚಿತ್ವಕ್ಕೆ ಆದ್ಯತೆ ನೀಡಿ ಸಾರ್ವಜನಿಕರ ಬಳಕೆಗೆ ಅನುಕೂಲ ಒದಗಿಸಲಾಗುವುದು ಎಂದರು.
ಕಂದಾಯ ದಾಖಲೆಗಳ ಗಣಕೀಕರಣದಲ್ಲಿ ಮುದ್ದೇಬಿಹಾಳ ತಾಲ್ಲೂಕಿಗೆ 10 ಸಾವಿರ ಗುರಿ ನೀಡಲಾಗಿದ್ದು 6-7 ಸಾವಿರ ಗುರಿ ತಲುಪುತ್ತಿದ್ದಾರೆ. ಇನ್ನಷ್ಟು ವೇಗವಾಗಿ ದಾಖಲೆಗಳ ಗಣಕೀಕರಣ ಮಾಡಲು ಕ್ರಮ ಜರುಗಿಸಬೇಕು ಎಂದು ತಿಳಿಸಿದ್ದೇವೆ ಎಂದರು.
ಕೆಲವೆಡೆ ಎ ಖಾತಾ ಬಿ ಖಾತಾ ನೀಡುವುದಕ್ಕೆ ವಿಳಂಬ ಮಾಡಲಾಗುತ್ತಿದೆ. ಎಲ್ಲ ದಾಖಲೆಗಳು ಇದ್ದಾಗ್ಯೂ ಉತಾರೆ ಕೊಡುವುದಕ್ಕೆ ವಿಳಂಬ ಮಾಡಲಾಗುತ್ತದೆ ಎಂದು ಸುದ್ದಿಗಾರರರು ಪ್ರಶ್ನಿಸಿದಾಗ ಅಂತಹ ವಿಳಂಬ ಕ್ರಮಗಳು ಕಂಡು ಬಂದಲ್ಲಿ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ನಕಲು ನಡೆದರೂ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಿಲ್ಲ. ಎಂದು ಪ್ರಶ್ನಿಸಿದಾಗ, ಉತ್ತರಿಸಿದ ಡಿಸಿ ಜಿಲ್ಲೆಯಲ್ಲಿ ಪರೀಕ್ಷಾ ನ್ಯೂನ್ಯತೆಗೆ ಸಂಬಂಧಿಸಿದಂತೆ ನಾಲ್ವರ ಮೇಲೆ ಕ್ರಮ ಕೈಗೊಳ್ಳಲಾಗಿದೆ. ಮುದ್ದೇಬಿಹಾಳದಲ್ಲೂ ಅಂತಹ ತಪ್ಪುಗಳು ನಡೆದಿದ್ದರೆ ದಾಖಲೆಗಳನ್ನು ನೀಡಿದರೆ ಕ್ರಮ ಜರುಗಿಸುತ್ತೇವೆ ಎಂದು ಡಿಸಿ ತಿಳಿಸಿದರು.
ಪುರಸಭೆ ವ್ಯಾಪ್ತಿಯಲ್ಲಿ ಮೆಗಾ ಮಾರುಕಟ್ಟೆ ನಿರ್ಮಾಣಕ್ಕೆ ಎರಡು ವಾರದಲ್ಲಿ ಚಾಲನೆ ನೀಡಲಾಗುತ್ತದೆ. ಇಂದಿರಾ ಕ್ಯಾಂಟೀನ್ ಕೆಲಸವೂ ಪೂರ್ಣಗೊಂಡಿದ್ದು ಸರ್ಕಾರದ ನಿರ್ದೇಶನದಂತೆ ಕ್ಯಾಂಟೀನ್ ಆರಂಭಿಸಲಾಗುವುದು ಎಂದು ಹೇಳಿದರು. ಎಸಿ ಗುರುನಾಥ ದಡ್ಡೆ, ಪುರಸಭೆ ಅಧ್ಯಕ್ಷ ಮಹೆಬೂಬ ಗೊಳಸಂಗಿ, ತಹಶೀಲ್ದಾರ್ ಬಲರಾಮ ಕಟ್ಟೀಮನಿ, ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ, ಪುರಸಭೆ ಸದಸ್ಯ ವೀರೇಶ ಹಡಲಗೇರಿ, ಶಿವು ಶಿವಪೂರ ಮೊದಲಾದವರು ಇದ್ದರು.