
ಚೆನ್ನೈ: ತಮಿಳುನಾಡಿನ ಸೇಲಂ-ನಾಸಿಯಾನೂರು ಹೆದ್ದಾರಿಯಲ್ಲಿ ಹಾಡಹಗಲೇ ಕಾರನ್ನು ಅಡ್ಡಗಟ್ಟಿ ರೌಡಿಶೀಟರ್ ಒಬ್ಬನ ಬರ್ಬರ ಹತ್ಯೆ ಮಾಡಲಾಗಿದೆ.

ಈ ಭೀಕರ ದಾಳಿಯ ದೃಶ್ಯವನ್ನು ಸ್ಥಳೀಯರು ತಮ್ಮ ಮೊಬೈಲ್ ಕ್ಯಾಮೆರಾಗಳಲ್ಲಿ ಸೆರೆಹಿಡಿದಿದ್ದಾರೆ.
ತಿರುಪ್ಪೋರಿನ ಪೆರಿಯಪಾಳ್ಯಂ ನಿವಾಸಿ 35 ವರ್ಷದ ಚಾಣಕ್ಯ ಅಲಿಯಾಸ್ ಜಾನ್ ಹತ್ಯೆಯಾದ ರೌಡಿಶೀಟರ್. ಸೇಲಂನಾದ್ಯಂತ ಹಲವಾರು ಪೊಲೀಸ್ ಠಾಣೆಗಳಲ್ಲಿ ಆತನ ವಿರುದ್ಧ ಅನೇಕ ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದವು. ಆತ ವಾಹನ ಮಾರಾಟ ಮತ್ತು ಸಾಲದ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದ.
ವರದಿಗಳ ಪ್ರಕಾರ ಜಾನ್ ತನ್ನ ಪತ್ನಿಯೊಂದಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಹಿಂದಿನಿಂದ ಬಂದ ದುಷ್ಕರ್ಮಿಗಳು ವಾಹನವನ್ನು ಜಾನ್‌ನ ಕಾರಿಗೆ ಡಿಕ್ಕಿ ಹೊಡೆದು ನಿಲ್ಲುವಂತೆ ಮಾಡಿದ್ದಾರೆ. ನಂತರ ನಾಲ್ವರು ವ್ಯಕ್ತಿಗಳು ಕಾರಿನಿಂದ ಹೊರಬಂದು ಆತನ ಪತ್ನಿ ಶರಣ್ಯಳನ್ನು ಪಕ್ಕಕ್ಕೆ ತಳ್ಳಿ ಜಾನ್ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದಾರೆ. ಶರಣ್ಯಾ ತನ್ನ ಪತಿಯನ್ನು ಬಿಟ್ಟು ಬಿಡುವಂತೆ ಎಷ್ಟೇ ಅಂಗಲಾಚಿದರೂ ದಾಳಿಕೋರರು ದಾಳಿಯನ್ನು ಮುಂದುವರಿಸಿದ್ದಾರೆ.
ಭೀಕರ ದಾಳಿಯಲ್ಲಿ ಜಾನ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಕೃತ್ಯದ ಬಳಿಕ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ನಂತರ ಪೊಲೀಸರು ಸ್ಥಳಕ್ಕಾಗಮಿಸಿ ಮೃತದೇಹವನ್ನು ಪೆರುಂದುರೆ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಆರೋಪಿಗಳಾದ ಸರೀಶ್, ಶರವಣನ್ ಮತ್ತು ಭೂಪಾಲನ್‌ನನ್ನು ಪೊಲೀಸರು ಬೆನ್ನಟ್ಟಿ, ಗುಂಡು ಹಾರಿಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಾಲ್ಕನೇ ಆರೋಪಿ ಕಾರ್ತಿಕ್ ನಂತರ ಬಂಧನಕ್ಕೊಳಗಾಗಿದ್ದಾನೆ.
ಈ ಘಟನೆ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.