
ಮುದ್ದೇಬಿಹಾಳ: ಬೇಸಿಗೆ ಕಾಲದಲ್ಲಿ ನೀರಿಗಾಗಿ ಪ್ರಾಣಿ, ಪಕ್ಷಿಗಳು ಬಹಳಷ್ಟು ಪರದಾಡಿ ಜೀವ ಕಳೆದುಕೊಳ್ಳುವ ಸಾಧ್ಯತೆ ಇದ್ದು, ಮಾನವೀಯ ದೃಷ್ಟಿಯಿಂದ ನಾವೆಲ್ಲರೂ ಪಕ್ಷಿಗಳಿಗೆ ಮಣ್ಣಿನ ಪಾತ್ರೆಗಳಲ್ಲಿ ನೀರು ಇಡುವ ಕೆಲಸ ಮಾಡಬೇಕು ಎಂದು ಹಸಿರು ತೋರಣ ಗೆಳೆಯರ ಬಳಗದ ಮಾಜಿ ಅಧ್ಯಕ್ಷರಾದ ನಾಗಭೂಷಣ ನಾವದಗಿ ಹೇಳಿದರು.

ಶನಿವಾರ ಪಟ್ಟಣದ ಹಸಿರು ತೋರಣ ಉದ್ಯಾನವನದಲ್ಲಿ “ವಿಶ್ವ ಗುಬ್ಬಚ್ಚಿ ದಿನ”ದ ಅಂಗವಾಗಿ ಮಣ್ಣಿನ ಪಾತ್ರೆಗಳ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬೇಸಿಗೆಯಲ್ಲಿ ಪಕ್ಷಿಗಳು ನೀರು ಹುಡುಕಿಕೊಂಡು ಅಲೆದಾಡುತ್ತಿರುತ್ತವೆ. ಒಂದು ಗುಟುಕು ನೀರು ಪಕ್ಷಿಗಳಿಗೆ ದೊರೆತರೆ ಅವುಗಳ ಜೀವ ಉಳಿಯುತ್ತದೆ. ಇದಕ್ಕಾಗಿ ನಾವು ಬಹಳ ಖರ್ಚು ಮಾಡುವಂತದೇನೂ ಇಲ್ಲ. ಒಂದು ಪಾತ್ರೆಯಲ್ಲಿ ಒಂದಿಷ್ಟು ನೀರು, ಧಾನ್ಯಗಳನ್ನು ಇಟ್ಟರೆ ದೊಡ್ಡ ಉಪಕಾರ ಮಾಡಿದಂತೆ ಎಂದರು. ವಕೀಲರ ಸಂಘದ ಮಾಜಿ ಅಧ್ಯಕ್ಷ ಎಚ್. ವೈ. ಪಾಟೀಲ ಮಾತನಾಡಿ, ಪ್ರಾಣಿ, ಪಕ್ಷಿಗಳ ಉಳಿವಿಗೆ ನಾವು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಬೇಸಿಗೆಯಲ್ಲಿ ಮಧ್ಯಾಹ್ನ ಹೊರಗೆ ಬರಲಾರದಷ್ಟು ಬೇಸಿಗೆ ಪ್ರಕರವಾಗಿರುತ್ತದೆ.
ನಮ್ಮ ನಮ್ಮ ಮಾಳಿಗೆಗಳ ಮೇಲೆ, ಕಂಪೌಂಡುಗಳ ಮೇಲೆ ಮಣ್ಣಿನ ಪಾತ್ರೆಗಳಲ್ಲಿ ನೀರು ತುಂಬಿಡುವ ಕೆಲಸ ಮಾಡೋಣ ಎಂದರು. ಡಾ.ವೀರೇಶ ಇಟಗಿ ಮಾತನಾಡಿ, ಬೇಸಿಗೆಯಲ್ಲಿ ನೀರು ಸಿಗದೇ ಪ್ರಾಣಿ, ಪಕ್ಷಿಗಳು ಜೀವ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚು. ಪಕ್ಷಿಗಳಿಗೆ ನೀರು ಇಡುವ ಅಭಿಯಾನದಲ್ಲಿ ಎಲ್ಲರೂ ಕೈಜೋಡಿಸುವಂತೆ ಮನವಿ ಮಾಡಿದರು.
ಬಳಗದ ಸಂಚಾಲಕ ಮಹಾಬಲೇಶ್ವರ ಗಡೇದ ಮಾತನಾಡಿ, ಕೇವಲ ಐವತ್ತು ರೂ.ಗೆ ಸಿಗುವ ಮಣ್ಣಿನ ಪಾತ್ರೆಗಳಲ್ಲಿ ಪಕ್ಷಿಗಳಿಗೆ ನೀರು ಇಡುವ ಮೂಲಕ ನಾವು ಅಪಾರ ಸಂತೋಷ, ನೆಮ್ಮದಿ ಕಂಡುಕೊಳ್ಳಲು ಸಾಧ್ಯವಿದೆ. ಬೇಸಿಗೆಯಲ್ಲಿ ನೀರಿನ ಅಭಾವ ಎಲ್ಲ ಕಡೆ ಕಾಣುತ್ತೇವೆ, ಕೆರೆ, ಹಳ್ಳ, ಕೊಳ್ಳಗಳು ಬತ್ತುವುದರಿಂದ ಪಕ್ಷಿಗಳು ನೀರು ಹುಡುಕಿಕೊಂಡು ಜನವಸತಿ ಪ್ರದೇಶಗಳತ್ತ ಬರುತ್ತವೆ. ನಾವು ಇಟ್ಟ ನೀರಿನಿಂದ ಪಕ್ಷಿಗಳ ಜೀವ ಉಳಿಸಲು ಸಾಧ್ಯ. ಪರಿಸರ ಸ್ನೇಹಿ ಮಣ್ಣಿನ ಪಾತ್ರೆಗಳನ್ನು ಖರೀದಿಸಿದರೆ, ಅವುಗಳನ್ನು ತಯಾರಿಸುವ ಕುಂಬಾರ ವೃತ್ತಿಗೆ ಸಹ ನಾವು ಬೆಂಬಲಿಸಿದಂತಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯತ ಮಾಜಿ ಸದಸ್ಯ ಶ್ರೀಶೈಲ ಮರೋಳ, ಹಸಿರು ತೋರಣ ಬಳಗದ ಮಾಜಿ ಅಧ್ಯಕ್ಷರಾದ
ಕೆ.ಆರ್. ಕಾಮಟೆ, ಬಿ.ಎಸ್. ಮೇಟಿ, ಅಶೋಕ ರೇವಡಿ, ರಾಜಶೇಖರ ಕಲ್ಯಾಣಮಠ, ರವಿ ಗೂಳಿ, ಗೌರವಾಧ್ಯಕ್ಷ ಜಿ.ಎಂ.ಹುಲಗಣ್ಣಿ, ಉಪಾಧ್ಯಕ್ಷ ಸೋಮಶೇಖರ ಚೀರಲದಿನ್ನಿ, ಕಾರ್ಯದರ್ಶಿ ಅಮರೇಶ ಗೂಳಿ, ಸದಸ್ಯರಾದ ಬಿ.ಎಂ.ಪಲ್ಲೇದ, ವಿಶ್ವನಾಥ ನಾಗಠಾಣ, ಮಲ್ಲಿಕಾರ್ಜುನ ಬಾಗೇವಾಡಿ, ಬಸವರಾಜ ಬಿಜ್ಜೂರ, ಸುರೇಶ ಕಲಾಲ, ವಿಲಾಸ ದೇಶಪಾಂಡೆ, ಡಾ.ವೀರೇಶ ಪಾಟೀಲ, ಡಾ.ಚಂದ್ರಶೇಖರ ಶಿವಯೋಗಿಮಠ, ಬಸವರಾಜ ಸಿದರಡ್ಡಿ, ವೀರೇಶ ಹಂಪನಗೌಡ್ರ, ಅಮರೇಶ ಐಹೊಳೆ, ಶಿವಾನಂದ ಇಂಡಿ, ಶಿವನಗೌಡ ಪಾಟೀಲ ಸೇರಿದಂತೆ ಹಸಿರು ತೋರಣ ಗೆಳೆಯರ ಬಳಗದ ಸದಸ್ಯರಿದ್ದರು. ಅಭಿಯಾನದಂಗವಾಗಿ ಮಣ್ಣಿನ ಪಾತ್ರೆಗಳನ್ನು ಹುಡ್ಕೋ ಬಡಾವಣೆಯ ನಿವಾಸಿಗಳಿಗೆ ವಿತರಿಸಲಾಯಿತು.