
ಮುದ್ದೇಬಿಹಾಳ : ಪಟ್ಟಣದ ಗ್ರಾಮದೇವತೆ ಜಾತ್ರೆಯನ್ನು ಮೇ. 30 ರಿಂದ ಐದು ದಿನಗಳ ಕಾಲ ಜರುಗಿಸಲಾಗುತ್ತಿದ್ದು ಸರ್ವ ಸಮಾಜದವರನ್ನು ಒಳಗೊಂಡು ಜಾತ್ರೆಯನ್ನು ಯಶಸ್ವಿಗೊಳಿಸಲು ಇಲ್ಲಿ ನಡೆದ ಸಭೆಯಲ್ಲಿ ಜಾತ್ರಾ ಕಮೀಟಿ ಪ್ರಮುಖರು ನಿರ್ಣಯ ಕೈಗೊಂಡರು.

ಪಟ್ಟಣದ ವಿಬಿಸಿ ಹೈಸ್ಕೂಲ್ ಮೈದಾನದ ಆವರಣದಲ್ಲಿರುವ ಸಂಗಮೇಶ್ವರ ವಸತಿ ನಿಲಯದ ಪಕ್ಕದ ದಾಸೋಹ ಕೋಣೆಯಲ್ಲಿ ಶುಕ್ರವಾರ ಆರಂಭಿಸಲಾದ ಗ್ರಾಮದೇವತೆ ಜಾತ್ರಾ ಕಾರ್ಯಾಲಯ ಉದ್ಘಾಟನೆ ಬಳಿಕ ನಡೆದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.
ಕಮೀಟಿ ಮುಖಂಡ, ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಪ್ರಭುರಾಜ ಕಲ್ಬುರ್ಗಿ ಮಾತನಾಡಿ, ಜಾತ್ರೆಯನ್ನು ಯಶಸ್ವಿಗೊಳಿಸಲು ಹಲವು ಸಮೀತಿಗಳನ್ನು ರಚಿಸಲಾಗುತ್ತಿದ್ದು ಹಿಂದಿನ ಜಾತ್ರೆಯಲ್ಲಿ ನೇತೃತ್ವ ವಹಿಸಿದ್ದವರ ಜೊತೆಗೆ ಇನ್ನುಳಿದವರನ್ನು ಸಮೀತಿಯಲ್ಲಿ ಸೇರ್ಪಡೆ ಮಾಡಿಕೊಳ್ಳಲು ಸಲಹೆ ಮಾಡಲಾಯಿತು. ವಿಬಿಸಿ ಹೈಸ್ಕೂಲ್ ಆಡಳಿತ ಮಂಡಳಿಯವರೇ ಜಾತ್ರೆಯ ಶೇ.60-70ರಷ್ಟು ಖರ್ಚನ್ನು ಶಾಲೆಯ ಮೈದಾನವನ್ನು ಬಾಡಿಗೆಗೆ ನೀಡುವ ಮೂಲಕ ಭರಿಸಲು ಒಪ್ಪಿರುವುದಕ್ಕೆ ಕಮೀಟಿ ಪರವಾಗಿ, ಊರಿನ ಪರವಾಗಿ ಅಭಿನಂದಿಸುವುದಾಗಿ ತಿಳಿಸಿದರು.
ಹಣಕಾಸು, ಪ್ರಚಾರ, ಮೆರವಣಿಗೆ, ಆಹಾರ, ಮುದ್ರಣ, ಸಾಂಸ್ಕೃತಿಕ, ಅಲಂಕಾರ ಸೇರಿದಂತೆ ಹಲವು ಸಮೀತಿಗಳನ್ನು ರಚಿಸಲಾಗುತ್ತದೆ ಎಂದು ಹೇಳಿದರು.
ವೀರಶೈವ ವಿದ್ಯಾವರ್ಧಕ ಸಂಘದ ನಿಕಟಪೂರ್ವ ಗೌರವ ಕಾರ್ಯದರ್ಶಿ ಎಂ. ಬಿ. ನಾವದಗಿ ಮಾತನಾಡಿ, ಜಾತ್ರೆಯನ್ನು ಸರ್ವ ಸಮಾಜದವರ ಸಹಕಾರದಿಂದ ಯಶಸ್ವಿಗೊಳಿಸೋಣ. ಹಿಂದಿನ ಸಮೀತಿಯಲ್ಲಿ ಆರ್ಥಿಕ ಶಿಸ್ತು ಕಾಪಾಡಿಕೊಂಡಿದ್ದು ಅವರನ್ನೇ ಮುಂದುವರೆಸಲು ಈಚೇಗೆ ನಡೆದ ಸಭೆಯಲ್ಲಿ ನಿರ್ಧರಿಸಲಾಗಿದೆ. ಎಲ್ಲರೂ ಒಗ್ಗೂಡಿ ಜಾತ್ರೆಯನ್ನು ಯಶಸ್ವಿಗೊಳಿಸೋಣ ಎಂದರು.
ಪುರಸಭೆ ಅಧ್ಯಕ್ಷ ಮಹೆಬೂಬ ಗೊಳಸಂಗಿ ಮಾತನಾಡಿ, ಜಾತ್ರೆಯ ಯಶಸ್ವಿಗಾಗಿ ರಚಿಸಲಾಗುವ ಸಮೀತಿಗಳಲ್ಲಿ ಇನ್ನಷ್ಟು ಸದಸ್ಯರನ್ನು ಸೇರ್ಪಡೆ ಮಾಡಿಕೊಳ್ಳಲಾಗುವುದು. ಆಸಕ್ತರು ವಿವಿಧ ಕಮೀಟಿಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವಂತೆ ವಿನಂತಿಸಿದರೆ ಪರಿಶೀಲನೆ ನಡೆಸಿ ಪರಿಗಣಿಸಲಾಗುವುದು ಎಂದರು.
ವಕೀಲರ ಸಂಘದ ಅಧ್ಯಕ್ಷ ಎಸ್. ಎಸ್. ಮಾಲಗತ್ತಿ, ಕಾಂಗ್ರೆಸ್ ಮುಖಂಡ ಅಬ್ದುಲ್ ಗಫೂರ್ ಮಕಾನದಾರ ಮಾತನಾಡಿ, ಕಳೆದ ಬಾರಿ ರಚಿಸಿದ್ದ ಸಮಿತಿಯವರಲ್ಲಿ ಪ್ರಮುಖರಿಗೆ ಸಮಿತಿ ರಚಿಸಲು ಅವಕಾಶ ಕಲ್ಪಿಸಿ ಗೊಂದಲಕ್ಕೆ ಆಸ್ಪದ ಇಲ್ಲದಂತೆ ಜಾತ್ರೆಯನ್ನು ನಡೆಸಿ ಎಂದರು.
ಕರ್ನಾಟಕ ಬ್ಯಾಂಕ್ ಮಾಜಿ ನಿರ್ದೇಶಕ ವೆಂಕನಗೌಡ ಪಾಟೀಲ ಮಾತನಾಡಿ, ಗ್ರಾಮದೇವತೆ ಜಾತ್ರೆಯ ಸಮೀತಿಗಳಲ್ಲಿ ಯುವಕರಿಗೆ ಆದ್ಯತೆ ನೀಡಬೇಕು. ಯಾರನ್ನೋ ಓಲೈಸುವುದಕ್ಕಾಗಿ ಮೆಚ್ಚಿಸುವುದಕ್ಕಾಗಿ ಸಮೀತಿಯಲ್ಲಿ ಹೆಸರುಗಳನ್ನು ಸೇರಿಸಬೇಡಿ. ಜಾತ್ರೆಯನ್ನು ಎಲ್ಲರೂ ಒಗ್ಗೂಡಿ ಯಶಸ್ವಿಗೊಳಿಸೋಣ ಎಂದರು.
ಪುರಸಭೆ ಉಪಾಧ್ಯಕ್ಷೆ ಪ್ರೀತಿ ದೇಗಿನಾಳ, ಮುಖಂಡರಾದ ಮಲ್ಲಿಕಾರ್ಜುನ ನಾಡಗೌಡ, ಶರಣು ಸಜ್ಜನ, ಸುನೀಲ ಇಲ್ಲೂರ, ಸುಧೀರ ನಾವದಗಿ, ಶಿವಕುಮಾರ ಬಿರಾದಾರ, ರಾಹುಲಗೌಡ ಪಾಟೀಲ, ಬಾಬು ಬಿರಾದಾರ, ಕಾಮರಾಜ ಬಿರಾದಾರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ, ಹುಲಗಪ್ಪ ನಾಯ್ಕಮಕ್ಕಳ, ರಾಜು ಕರಡ್ಡಿ, ಗುರುಸ್ವಾಮಿ ಬೂದಿಹಾಳಮಠ, ಉಮೇಶ ರಾಯನಗೌಡರ, ಶ್ರೀಶೈಲ ಹೂಗಾರ, ಮುತ್ತು ರಾಯಗೊಂಡ ಸೇರಿದಂತೆ ಪುರಸಭೆ ಸದಸ್ಯರು, ಆರ್ಚಕ ಗುಂಡು ಬಡಿಗೇರ ಮೊದಲಾದವರು ಪಾಲ್ಗೊಂಡಿದ್ದರು.