
ಮುದ್ದೇಬಿಹಾಳ : ಭೂಮಿಯ ಮೇಲೆ ಕುಡಿಯುವುದಕ್ಕೆ ಅತ್ಯಂತ ಕಡಿಮೆ ಪ್ರಮಾಣದಲ್ಲಿರುವ ನೀರನ್ನು ಮಿತವ್ಯಯದಿಂದ ಬಳಸಬೇಕು ಎಂದು ಸಿವ್ಹಿಲ್ ನ್ಯಾಯಾಧೀಶರಾದ ರವೀಂದ್ರಕುಮಾರ ಕಟ್ಟಿಮನಿ ಹೇಳಿದರು.

ಪಟ್ಟಣದ ನ್ಯಾಯಾಲಯದ ಒಳಾಂಗಣದಲ್ಲಿ ಮಂಗಳವಾರ ವಿಶ್ವ ಜಲ ದಿನದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಪರಿಸರದ ಅಸಮತೋಲನದಿಂದ ನೀರಿಗಾಗಿ ಭೂಮಿ ಮೇಲಿರುವ ಜೀವಜಂತುಗಳು ತೊಂದರೆ ಎದುರಿಸುವಂತಾಗುತ್ತದೆ. ಪರಿಸರದ ಬೆಳವಣಿಗೆಯಿಂದ ಈ ತೊಂದರೆಯನ್ನು ನಿವಾರಿಸಬಹುದಾಗಿದೆ ಎಂದರು.
ವಕೀಲರ ಸಂಘದ ಅಧ್ಯಕ್ಷ ಎಸ್. ಎಸ್. ಮಾಲಗತ್ತಿ ಮಾತನಾಡಿ, ಜಲಮೂಲಗಳನ್ನು ಕಲುಷಿತಗೊಳಿಸದೇ ಅವುಗಳನ್ನು ಸ್ವಚ್ಛವಾಗಿಟ್ಟರೆ ಭವಿಷ್ಯದ ಪೀಳಿಗೆಗೂ ಶುದ್ಧ ನೀರು ಬಿಟ್ಟು ಹೋದ ನೆನಪು ಮುಂದಿನ ಜನಾಂಗ ಮಾಡಿಕೊಳ್ಳುತ್ತದೆ ಎಂದರು.
ನ್ಯಾಯಾಧೀಶರಾದ ಸಂಪತ್ತಕುಮಾರ ಬಳೂಲಗಿಡದ, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಪಿ. ಬಿ. ಗೌಡರ, ಪುರಸಭೆ ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ, ಎಪಿಪಿ ನಾಗರಾಜ ಪೂಜಾರ, ಬಸವರಾಜ ಆಹೇರಿ, ಬಿ. ವಾಯ್. ಕವಡಿ ಮೊದಲಾದವರು ಇದ್ದರು.