ನಾಲತವಾಡ : ಮರಳು ತುಂಬಿಕೊಂಡು ಹೋಗುತ್ತಿದ್ದ ಟಿಪ್ಪರ್ ಹಾಯ್ದು ಬೈಕ್ ಸವಾರ ಸ್ಥಳದಲ್ಲೇ ಅಸುನೀಗಿದ ಘಟನೆ ಸೋಮವಾರ ಪಟ್ಟಣದ ಕೆನರಾ ಬ್ಯಾಂಕ್ ಮುಂದುಗಡೆ ನಡೆದಿದೆ.
ಪಟ್ಟಣದ ನಿವಾಸಿ ವೀರೇಶ ಸಂ. ವಡ್ಡರ(35) ಮೃತಪಟ್ಟ ವ್ಯಕ್ತಿ. ಬೈಕ್ ಮೇಲೆ ಸಂಚರಿಸುತ್ತಿದ್ದ ಇನ್ನೋರ್ವ ಮಹಿಳೆ ದುರ್ಗಮ್ಮ ಬೈಕ್‌ನಿಂದ ರಸ್ತೆ ಪಕ್ಕದಲ್ಲಿ ಉರುಳಿ ಬಿದ್ದಿದ್ದು ಪ್ರಾಣಾಪಾಯದಿಂದ ಬದುಕುಳಿದಿದ್ದಾರೆ.
ತಾಳಿಕೋಟೆಯಿಂದ ಮರಳು ಹೇರಿಕೊಂಡು ಘಾಳಪೂಜಿ ಕಡೆಗೆ ಟಿಪ್ಪರ್ ಹೊರಟಿತ್ತು. ಘಟನೆ ನಡೆಯುತ್ತಲೇ ನೂರಾರು ಜನ ಜಮಾಯಿಸಿದ್ದರಿಂದ ಕೆಲಕಾಲ ಸಂಚಾರ ಅಸ್ತವ್ಯಸ್ತವಾಗಿತ್ತು. ಘಟನಾ ಸ್ಥಳಕ್ಕೆ ಸಿಪಿಐ ಮೊಹ್ಮದ ಫಸಿವುದ್ದೀನ, ತಾಳಿಕೋಟಿ ಪಿಎಸ್‌ಐ ರಾಮನಗೌಡ ಸಂಕನಾಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಟಿಪ್ಪರ್ ಚಾಲಕನನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







