
ಮುದ್ದೇಬಿಹಾಳ : ಕುಟುಂಬದಲ್ಲಿ ಅತ್ತೆ ಸೊಸೆಯಂದಿರು ಹೊಂದಾಣಿಕೆಯ ಜೀವನ ನಡೆಸಬೇಕು ಎಂದು ಕುಂಟೋಜಿ ಚೆನ್ನವೀರ ಶಿವಾಚಾರ್ಯರು ಹೇಳಿದರು.

ತಾಲ್ಲೂಕು ತಂಗಡಗಿ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಜಾತ್ರೋತ್ಸವ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಾಮೂಹಿಕ ವಿವಾಹಗಳಲ್ಲಿ ಮದುವೆಯಾಗುವವರ ಮದುವೆ ಬಡವರ ಮದುವೆಗಳಲ್ಲ, ಅವು ಭಾಗ್ಯವಂತರ ಮದುವೆಗಳು. ಇಲ್ಲಿ ಮದುವೆಯಾಗುವವರು ಪುಣ್ಯವಂತರು ಎಂದರು.
ಬಿಲ್‌ಕೆರೂರು ಬಿಲ್ವಾಶ್ರಮದ ಸಿದ್ಧಲಿಂಗ ಶಿವಾಚಾರ್ಯರು ಮಾತನಾಡಿ, ತಂಗಡಗಿಯಲ್ಲಿ ದುರ್ಗಾದೇವಿ ಜಾತ್ರೆಯ ಸಮಯದಲ್ಲಿ ಸಾಮೂಹಿಕ ವಿವಾಹ ಮಾಡಿರುವುದು ಮಾದರಿ ಕಾರ್ಯ. ಜಾತ್ರೆಗಳು ಸಂಸ್ಕೃತಿಯನ್ನು ಪಸರಿಸುವ ವಾಹಕಗಳಾಗಬೇಕು ಎಂದರು.
ಇಳಕಲ್ಲ ಉಪತಹಸೀಲ್ದಾರ್ ಈಶ್ವರ ಗಡ್ಡಿ, ಬಸವನ ಬಾಗೇವಾಡಿ ಸಂಸ್ಥಾನ ಹಿರೇಮಠದ ಶಿವಪ್ರಕಾಶ ಶಿವಾಚಾರ್ಯರು, ಡಾ. ಸೋಮಶೇಖರ ಶಿವಾಚಾರ್ಯರು ಮಾತನಾಡಿದರು. ದುರ್ಗಾದೇವಿ ದೇವಸ್ಥಾನ ಕಮಿಟಿ ಅಧ್ಯಕ್ಷ ಶಾಂತಪ್ಪ ಪೂಜಾರಿ, ಸಂಗಣ್ಣ ಗುಳೇದಗುಡ್ಡ, ಶ್ರೀಶೈಲ ಹುಲ್ಲಳ್ಳಿ, ಚರಲಿಂಗಪ್ಪ ಹಾದಿಮನಿ, ಮಹಾಂತೇಶ ಪೂಜಾರಿ, ಕಾಶಪ್ಪ ಪುಡಜಾಲಿ,ಮಂಜು ಪೂಜಾರಿ, ಸುರೇಶ ಹಾದಿಮನಿ, ಮಹಾಂತಪ್ಪ ಹಾದಿಮನಿ, ಸಿದ್ದರಾಮಪ್ಪ ಡೊಂಗರಗಾಂವಿ, ಬಸವರಾಜ ಹೊಳಿ, ಎಎಸ್‌ಐ ಬಸವರಾಜ ಪವಾರ ಇದ್ದರು.
ಸಮಾರಂಭ ಉದ್ಘಾಟಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅವರ ತಾಯಿ ಹುಲಗಮ್ಮ ತಂಗಡಗಿ ಅವರನ್ನು ದೇವಸ್ಥಾನ ಕಮಿಟಿಯಿಂದ ಸನ್ಮಾನಿಸಲಾಯಿತು. ಒಟ್ಟು 29 ಜೋಡಿ ವಧು ವರರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಸಿ.ಎಸ್. ನಾವಿ ಸ್ವಾಗತಿಸಿದರು. ರಮೇಶ ಲಿಂಗದಳ್ಳಿ ನಿರೂಪಿಸಿದರು. ಸಂಗಣ್ಣ ದೇವರಮನಿ ವಂದಿಸಿದರು.