
ಮುದ್ದೇಬಿಹಾಳ : ಹೋಳಿ ಆಚರಣೆಯ ಸಂದರ್ಭದಲ್ಲಿ ಹಾಡಹಗಲೇ ನಡು ಮದ್ಯಾಹ್ನ ಪಟ್ಟಣದ ಮುಖ್ಯರಸ್ತೆಯಲ್ಲಿರುವ ಮೊಬೈಲ್ ಅಂಗಡಿಯೊಂದರ ಬೀಗ ಮುರಿದ ಕಳ್ಳನೋರ್ವ ನಾಲ್ಕು ಮೊಬೈಲ್ ಹಾಗೂ ಅಂಗಡಿಯಲ್ಲಿದ್ದ ನಗದು ಕಳ್ಳತನ ಮಾಡಿಕೊಂಡು ಪರಾರಿಯಾಗಿರುವ ಘಟನೆ ಶನಿವಾರ ನಡೆದಿದೆ.

ಪಟ್ಟಣದ ದನದ ದವಾಖಾನೆ ಎದುರಿಗೆ ಇರುವ ಆರ್ಯವರ್ಧನ ಮೊಬೈಲ್ ಶಾಪ್‌ನಲ್ಲಿ ಈ ಕಳ್ಳತನ ನಡೆದಿದೆ. ಮದ್ಯಾಹ್ನ 12.15 ರಿಂದ 12.30ರವರೆಗೆ ಈ ಕಳ್ಳತನ ಮಾಡಿರುವುದು ಅಂಗಡಿಯಲ್ಲಿರುವ ಸಿಸಿ ಕ್ಯಾಮೆರಾದ ದೃಶ್ಯದಲ್ಲಿ ಸೆರೆಯಾಗಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅಂಗಡಿ ಮಾಲೀಕ ರಾಜು ನಾಡಗೌಡ, ಹೋಳಿಹಬ್ಬದ ಸಲುವಾಗಿ ಮನೆಯವರೊಂದಿಗೆ ನಾವು ಕೂಡಲಸಂಗಮಕ್ಕೆ ತೆರಳಿದ್ದೇವು. ಮದ್ಯಾಹ್ನ ಪಕ್ಕದ ಅಂಗಡಿಯವರು ದೂರವಾಣಿ ಕರೆ ಮಾಡಿದಾಗ ಕಳ್ಳತನ ಮಾಡಿರುವುದು ತಿಳಿದು ಬಂದಿದೆ. ನಾಲ್ಕು ಮೊಬೈಲ್ ಹಾಗೂ ನಗದು ಸೇರಿದಂತೆ 75 ಸಾವಿರ ರೂ.ಮೌಲ್ಯದ ವಸ್ತುಗಳು ಕಳ್ಳತನವಾಗಿವೆ. ಹಾಡಹಗಲೇ ಅಂಗಡಿ ಕಳುವು ಆಗಿರುವುದು ದಿಗ್ಭ್ರಮೆ ಮೂಡಿಸಿದೆ ಎಂದು ತಿಳಿಸಿದರು.
ಘಟನಾ ಸ್ಥಳಕ್ಕೆ ಪೊಲೀಸ್ ಪೇದೆ ಗುಡಿಮನಿ ಭೇಟಿ ನೀಡಿ ಪರಿಶೀಲನೆ ನಡೆಸಿ ಅಂಗಡಿಕಾರರ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮುಖ್ಯರಸ್ತೆಯಲ್ಲೇ ಹಗಲು ಹೊತ್ತಿನಲ್ಲಿ ಅಂಗಡಿ ಕಳ್ಳತನ ಆಗಿರುವುದು ಸಾರ್ವಜನಿಕರು, ವ್ಯಾಪಾರಸ್ಥರಲ್ಲಿ ಅಚ್ಚರಿಗೆ ಕಾರಣವಾಗಿದೆ. ಹೋಳಿ ಹಬ್ಬದ ಅಂಗವಾಗಿ ಬಹುತೇಕ ಅಂಗಡಿ ಮುಗ್ಗಟ್ಟುಗಳು ಬಂದ್ ಆಗಿದ್ದನ್ನೇ ವರದಾನ ಮಾಡಿಕೊಂಡಿರುವ ಕಳ್ಳ ತನ್ನ ಕೈಚಳಕ ತೋರಿಸಿದ್ದಾನೆ.