
ಮುದ್ದೇಬಿಹಾಳ : ಮುಸ್ಲಿಂರ ತುಷ್ಟೀಕರಣದಲ್ಲಿ ಕಾಂಗ್ರೆಸ್ ಪಕ್ಷ ತೊಡಗಿದೆ. ಸಂವಿಧಾನದಲ್ಲಿ ಅವಕಾಶವೇ ಇಲ್ಲದ ಧರ್ಮದ ಆಧಾರದ ಮೇಲೆ ಮುಸ್ಲಿಂರಿಗೆ ಗುತ್ತಿಗೆಯಲ್ಲಿ ಶೇ.4 ರಷ್ಟು ಮೀಸಲಾತಿ ಕೊಡುವುದಾಗಿ ಹೇಳುವ ಡಿಸಿಎಂ ಡಿ. ಕೆ. ಶಿವಕುಮಾರ ಮುಸ್ಲಿಂರಿಗೆ ಮೀಸಲಾತಿ ಕೊಡುವುದಕ್ಕಾಗಿ ಸಂವಿಧಾನವನ್ನೂ ಬದಲಾವಣೆ ಮಾಡುತ್ತೇವೆ ಎಂದು ಹೇಳಿಕೆ ನೀಡುತ್ತಾರೆ ಇದನ್ನು ಬಿಜೆಪಿ ಬಲವಾಗಿ ಖಂಡಿಸುತ್ತದೆ ಎಂದು ಮಾಜಿ ಶಾಸಕ ಎ. ಎಸ್. ಪಾಟೀಲ್ ನಡಹಳ್ಳಿ ಹೇಳಿದರು.

ಪಟ್ಟಣದ ದಾಸೋಹ ಭವನದಲ್ಲಿರುವ ಬಿಜೆಪಿ ಮಂಡಲ ಕಚೇರಿಯಲ್ಲಿ ಬುಧವಾರ ಬಿಜೆಪಿ ನೂತನ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಅವರ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಕಾಂಗ್ರೆಸ್ ಪಕ್ಷದ ಓಟಬ್ಯಾಂಕ್ ಸಲುವಾಗಿ ಮುಸ್ಲಿಂರಿಗಾಗಿ 2000 ಕೋಟಿ ರೂ. ವಿಶೇಷ ಅನುದಾನವನ್ನು ಶಾದಿಭಾಗ್ಯ ಹೆಸರಿನಲ್ಲಿ ತೆಗೆದಿರಿಸಿದ್ದಾರೆ. ಎಲ್ಲ ಜಾತಿ, ಜನಾಂಗದವರಲ್ಲಿ ಬಡವರು,ಹಿಂದುಳಿದವರು ಇದ್ದಾರೆ. ಆದರೆ ಮುಸ್ಲಿಂರ ಓಲೈಕೆಯಲ್ಲಿ ಕಾಂಗ್ರೆಸ್ ತೊಡಗಿದೆ ಎಂದು ಮಾಜಿ ಶಾಸಕ ನಡಹಳ್ಳಿ ವಾಗ್ದಾಳಿ ನಡೆಸಿದರು.
ಬಿಜೆಪಿ ನೂತನ ಜಿಲ್ಲಾಧ್ಯಕ್ಷರಾಗಿ ಗುರುಲಿಂಗಪ್ಪ ಅಂಗಡಿ ಅವರು ಆಯ್ಕೆಯಾಗಿರುವುದು ಜಿಲ್ಲೆಯ ಕಾರ್ಯಕರ್ತರಿಗೆ ಹರ್ಷವನ್ನುಂಟು ಮಾಡಿದೆ. ಮುಂಬರುವ ದಿನಗಳಲ್ಲಿ ಪಕ್ಷದ ಹಿರಿಯ ನಾಯಕರಾದ ಬಿ. ಎಸ್. ಯಡಿಯೂರಪ್ಪ, ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಅವರ ಕೈ ಬಲಪಡಿಸಲು ಕಾರ್ಯಕರ್ತರು ಶ್ರಮಿಸಬೇಕು. ಪಕ್ಷದ ಗೊಂದಲಗಳನ್ನು ನಾಯಕರು ಪರಿಹರಿಸಿದ್ದಾರೆ. ಪಕ್ಷದಲ್ಲಿ ಈಗ ಯಾವುದೇ ಗೊಂದಲಗಳಿಲ್ಲ ಎಂದು ಹೇಳಿದರು.
ಬಿಜೆಪಿ ನೂತನ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಮಾತನಾಡಿ, ಪಕ್ಷದ ನಿಷ್ಠಾವಂತ ಕಾರ್ಯಕರ್ತರು, ನಾಯಕರ ಮನಸ್ಸಿಗೆ ನೋವಾಗದಂತೆ ನಡೆದುಕೊಳ್ಳುತ್ತೇನೆ. ಕಾಂಗ್ರೆಸ್ ಪಕ್ಷ ಶೇ.4ರ ಮೀಸಲಿನ ಹೆಸರಿನಲ್ಲಿ ಮುಸ್ಲಿಂರ ಮೂಗಿಗೆ ತುಪ್ಪ ಒರೆಸುವ ಕೆಲಸ ಮಾಡುತ್ತಿದೆ. ರಾಜ್ಯದಲ್ಲಿ ಅಭಿವೃದ್ಧಿ ನಿಂತು ಹೋಗಿದ್ದು ಈ ಸರ್ಕಾರದಲ್ಲಿ ಯಾರೊಬ್ಬರೂ ನೆಮ್ಮದಿಯಿಂದ ಇಲ್ಲ. ಉತ್ತರ ಪ್ರದೇಶ, ಗುಜರಾತ್ ರಾಜ್ಯಗಳಲ್ಲಿ ಮುಸ್ಲಿಂರು ಬಿಜೆಪಿಯ ಹಿಂದೆ ಇದ್ದಾರೆ. ಕಾಂಗ್ರೆಸ್‌ನ ಕುತಂತ್ರದ ಬಗ್ಗೆ ಮುಸ್ಲಿಂರು ದೇಶದಲ್ಲಿ ಜಾಗೃತರಾಗುವ ಕಾಲ ಸನ್ನಿಹಿತವಾಗಿದೆ ಎಂದರು.
ಬಿಜೆಪಿ ಜಿಲ್ಲಾ ಮುಖಂಡ ಸುರೇಶಗೌಡ ಬಿರಾದಾರ ಮಾತನಾಡಿ, ಪಕ್ಷದ ವರಿಷ್ಠರು ಕೆಲವರಿಂದ ಪಕ್ಷದಲ್ಲಿ ಉಂಟಾಗಿದ್ದ ಭಿನ್ನಮತಕ್ಕೆ ತಕ್ಕ ಉತ್ತರ ಕೊಟ್ಟಿದ್ದಾರೆ. ಪಕ್ಷದ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಗುರುಲಿಂಗಪ್ಪ ಅಂಗಡಿಯವರಂತಹ ಸೌಮ್ಯ ಸ್ವಭಾವದ ವ್ಯಕ್ತಿಯನ್ನು ಆಯ್ಕೆ ಮಾಡಿರುವ ನಡಹಳ್ಳಿಯವರಾದಿಯಾಗಿ ಪಕ್ಷದ ಎಲ್ಲ ವರಿಷ್ಠರಿಗೆ ಅಭಿನಂದಿಸುವುದಾಗಿ ತಿಳಿಸಿದರು.
ಪಕ್ಷದ ಮಂಡಲ ಅಧ್ಯಕ್ಷ ಜಗದೀಶ ಪಂಪಣ್ಣವರ, ಮುಖಂಡರಾದ ಎಂ. ಎಸ್. ಪಾಟೀಲ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಹೇಮರಡ್ಡಿ ಮೇಟಿ, ಎಂ.ಬಿ.ಅಂಗಡಿ, ಗಂಗಾಧರರಾವ ನಾಡಗೌಡರ, ಕೆಂಚಪ್ಪ ಬಿರಾದಾರ, ಮಲಕೇಂದ್ರಗೌಡ ಪಾಟೀಲ್, ಸುರೇಶಗೌಡ ಬಿರಾದಾರ ಮತ್ತಿತರರು ಮಾತನಾಡಿದರು. ಪಕ್ಷದ ಮುಖಂಡ ಬಿ. ಪಿ. ಕುಲಕರ್ಣಿ, ಸೋಮನಗೌಡ ಬಿರಾದಾರ, ಗೌರಮ್ಮ ಹುನಗುಂದ, ಮಂಜುನಾಥಗೌಡ ಪಾಟೀಲ, ಪರಶುರಾಮ ನಾಲತವಾಡ, ಸಿದ್ಧರಾಜ ಹೊಳಿ ಪುರಸಭೆ ಸದಸ್ಯರು,ಪಕ್ಷದ ಕಾರ್ಯಕರ್ತರು ಇದ್ದರು.
ಅಂಗಡಿ ಸ್ವಾಗತದ ನೆಪ, ಯತ್ನಾಳ ಉಚ್ಛಾಟನೆ ಹರ್ಷ : ದೇವರ ಹಿಪ್ಪರಗಿ ಮತಕ್ಷೇತ್ರದಲ್ಲಿ ಹಿಂದೆ ಎ. ಎಸ್. ಪಾಟೀಲ್ ನಡಹಳ್ಳಿ ಅವರ ವಿರುದ್ಧ ಸ್ಪರ್ಧಿಸಿ ಪರಾಜಿತರಾಗಿದ್ದ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಪಕ್ಷದ ಕೇಂದ್ರ ಶಿಸ್ತು ಸಮೀತಿ ಬುಧವಾರ ಪಕ್ಷದಿಂದ ಉಚ್ಛಾಟಿಸಿದ ಸುದ್ದಿ ಬಹಿರಂಗಗೊಳ್ಳುತ್ತಲೇ ಮಾಜಿ ಶಾಸಕ ನಡಹಳ್ಳಿಯವರ ನಿವಾಸದಲ್ಲಿ ಸಂಭ್ರಮ ಮನೆ ಮಾಡಿತ್ತು. ನೂತನ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಅವರನ್ನು ಸ್ವಾಗತಿಸುವ ನೆಪದಲ್ಲಿ ಅಂಬೇಡ್ಕರ್ ವೃತ್ತ ಹಾಗೂ ಮಾಜಿ ಶಾಸಕ ನಡಹಳ್ಳಿಯವರ ಮನೆ ಮುಂದೆ ಪಟಾಕಿಯನ್ನೂ ಸಿಡಿಸಿ ನಡಹಳ್ಳಿಯವರ ಅಭಿಮಾನಿಗಳು, ಕೆಲವು ಕಾರ್ಯಕರ್ತರು ಸಂಭ್ರಮಿಸಿದರು. ಇದು ಯತ್ನಾಳರ ಉಚ್ಛಾಟನೆಗೆ ವ್ಯಕ್ತಪಡಿಸಿದ ಹರ್ಷವೋ, ನೂತನ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ಅಂಗಡಿ ಅವರ ಆಗಮನಕ್ಕೆ ತೋರಿದ ಸ್ವಾಗತವೋ ಎಂಬುದು ಚರ್ಚೆಗೆ ನಾಂದಿ ಹಾಡಿತು. ನಡಹಳ್ಳಿಯವರಂತೂ ಸಂಭ್ರಮದಿಂದ ಅಂಗಡಿಯವರ ಸನ್ಮಾನ ಕಾರ್ಯಕ್ರಮದಲ್ಲಿ ಓಡಾಡಿದ್ದು ವಿಶೇಷವಾಗಿತ್ತು.