
ಮುದ್ದೇಬಿಹಾಳ : ಬಿಜೆಪಿಯಿಂದ ಆರು ವರ್ಷಗಳ ಕಾಲ ಉಚ್ಚಾಟನೆಗೊಳಗಾಗಿರುವ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅವರನ್ನು ಗೌರವಯುತವಾಗಿ ಮರಳಿ ಬಿಜೆಪಿಗೆ ಸೇರ್ಪಡೆ ಮಾಡಿಕೊಳ್ಳಬೇಕು ಎಂದು ಪಂಚಮಸಾಲಿ ಸಮಾಜದ ಮುಖಂಡರು ಇಂದಿಲ್ಲಿ ಆಗ್ರಹಿಸಿದರು.

ಪಟ್ಟಣದ ಏಪಿಎಂಸಿಯಲ್ಲಿರುವ ಬಸಲಿಂಗಪ್ಪ ರಕ್ಕಸಗಿ ಅವರ ಅಡತಿ ಅಂಗಡಿಯಲ್ಲಿ ಗುರುವಾರ ಪಂಚಮಸಾಲಿ ಸಮಾಜದ ವತಿಯಿಂದ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಾಜದ ಮುಖಂಡರಾದ ಶಿವಶಂಕರಗೌಡ ಹಿರೇಗೌಡರ, ಸಮಾಜದ ತಾಲ್ಲೂಕು ಅಧ್ಯಕ್ಷ ಅಮರೇಶ ಗೂಳಿ, ಕಾಮರಾಜ ಬಿರಾದಾರ ಮೊದಲಾದವರು, ಬಿಜೆಪಿಯಲ್ಲಿನ ಕುಟುಂಬ ರಾಜಕಾರಣದ ಬಗ್ಗೆ ಧ್ವನಿ ಎತ್ತಿದ್ದಕ್ಕೆ ಪಕ್ಷದಿಂದ ಉಚ್ಚಾಟಿಸುವ ನಿರ್ಧಾರ ಕೈಗೊಂಡಿರುವುದು ಅಚ್ಚರಿಗೆ ಕಾರಣವಾಗಿದೆ. ಸಮಾಜದ ನಾಯಕನಿಗೆ ಅನ್ಯಾಯವಾದಾಗ ಅವರ ಪರ ಧ್ವನಿ ಎತ್ತುವುದು ನಮ್ಮ ಕರ್ತವ್ಯ. ಸಮಾಜದ ಮೀಸಲಾತಿ ಸಲುವಾಗಿಯೂ ಯತ್ನಾಳರು ಹೋರಾಟದಲ್ಲಿ ಪಾಲ್ಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರನ್ನು ಉಚ್ಚಾಟಿಸುವ ಆದೇಶವನ್ನು ಬಿಜೆಪಿ ವರಿಷ್ಠರಾದ ಮೋದಿ, ಅಮೀತ ಷಾ, ಜೆ.ಪಿ.ನಡ್ಡಾ ಮರುಪರಿಶೀಲಿಸಬೇಕು ಎಂದು ಒತ್ತಾಯಿಸಿದರು.
ಏ.7 ರಂದು ಬೆಳಗ್ಗೆ 10 ಗಂಟೆಗೆ ಬನಶಂಕರಿ ದೇವಸ್ಥಾನದಿಂದ ಮುಖ್ಯರಸ್ತೆಯಲ್ಲಿ ಸಾಗಿ ಬಸವೇಶ್ವರ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಅಂಬೇಡ್ಕರ್ ವೃತ್ತದಿಂದ ರಾಣಿ ಚೆನ್ನಮ್ಮನವರ ವೃತ್ತದಲ್ಲಿ ಬಹಿರಂಗ ಸಭೆ ನಡೆಸಲಾಗುವುದು ಎಂದು ತಿಳಿಸಿದರು.
ಪುರಸಭೆ ಸದಸ್ಯ ವೀರೇಶ ಹಡಲಗೇರಿ, ಮುಖಂಡ ಅರವಿಂದ ಕೊಪ್ಪ ಮಾತನಾಡಿ, ಪಂಚಮಸಾಲಿ ಸಮಾಜದ ಪರಮೋಚ್ಛ ನಾಯಕರಾಗಿರುವ ಯತ್ನಾಳರ ಉಚ್ಚಾಟನೆ ಹಿಂದೆ ಕುಟುಂಬ ರಾಜಕಾರಣ ಕೆಲಸ ಮಾಡಿದೆ. ಪಕ್ಷದ ವರಿಷ್ಠರಿಗೆ ಯತ್ನಾಳ ಪಕ್ಷಕ್ಕೆ ಅಗತ್ಯ ಎಂಬುದನ್ನು ಮನವರಿಕೆ ಮಾಡಿಕೊಡಲು ಹೋರಾಟ ಯಶಸ್ವಿಗೊಳಿಸಬೇಕು ಎಂದು ಸಮಾಜದ ಬಾಂಧವರಿಗೆ ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಯುವ ಘಟಕದ ತಾಲ್ಲೂಕು ಅಧ್ಯಕ್ಷ ರವಿ ಎಸ್. ಕಮತ, ಮುಖಂಡರಾದ ಬಸಲಿಂಗಪ್ಪ ರಕ್ಕಸಗಿ, ಶರಣು ಸಾಲವಾಡಗಿ, ಅನಿಲ ಪಾಟೀಲ, ಮಹಾಂತೇಶ ನಿಡಗುಂದಿ ಮೊದಲಾದವರು ಇದ್ದರು.
ಯತ್ನಾಳ ಪರ ಗ್ಯಾರಂಟಿ ಸಮೀತಿ ಅಧ್ಯಕ್ಷರ ಬ್ಯಾಟಿಂಗ್
ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲ್ಲೂಕು ಅಧ್ಯಕ್ಷ ಶಿವಶಂಕರಗೌಡ ಹಿರೇಗೌಡರ ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ ಯತ್ನಾಳ ಪರ ಬ್ಯಾಟಿಂಗ್ ಮಾಡಿ ಬಿಜೆಪಿ ವರಿಷ್ಠರು ಅವರನ್ನು ಮರಳಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದ್ದು ತೀವ್ರ ಚರ್ಚೆಗೆ ಕಾರಣವಾಯಿತು. ಅದರಲ್ಲೂ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿರುವ ಪಂಚಮಸಾಲಿ ಸಮಾಜದ ನಾಯಕರಾದ ಕಾಮರಾಜ ಬಿರಾದಾರ, ಅಮರೇಶ ಗೂಳಿ ಮೊದಲಾದವರು ಯತ್ನಾಳ ಪಂಚಮಸಾಲಿ ಸಮಾಜದ ಹೋರಾಟದಲ್ಲಿ ಭಾಗಿಯಾಗಿರುವ ಕಾರಣ ಸಮಾಜದ ವತಿಯಿಂದ ಅವರಿಗೆ ನೈತಿಕ ಬೆಂಬಲ ಸೂಚಿಸಿ ಈ ಹೋರಾಟ ಪಕ್ಷಾತೀತವಾಗಿ ಹಮ್ಮಿಕೊಂಡಿರುವುದಾಗಿ ತಿಳಿಸಿದರು.