
ಮುದ್ದೇಬಿಹಾಳ : ಕೃಷ್ಣಾ ನದಿ ತೀರದಲ್ಲಿ ಹಲವು ದಿನಗಳಿಂದ ನಡೆದಿರುವ ಅಕ್ರಮವಾಗಿ ನದಿ ಪಾತ್ರದ ಮಣ್ಣು ಸಾಗಾಟ ಮಾಡುತ್ತಿರುದನ್ನು ತಡೆಗಟ್ಟದೇ ಯಾಕೆ ತಾಲ್ಲೂಕಾಡಳಿತದ ಅಧಿಕಾರಿಗಳು ಮೌನವಾಗಿದ್ದಾರೆ? ಎಂದು ಯುವಜನ ಸೇನೆ ಸಂಘಟನೆ ರಾಜ್ಯಾಧ್ಯಕ್ಷ ಶಿವಾನಂದ ವಾಲಿ ಪ್ರಶ್ನಿಸಿದರು.

ಪಟ್ಟಣದ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಮಂಗಳವಾರ ವಿವಿಧ ಸಂಘಟನೆಗಳ ಹೋರಾಟಗಾರರು ಹಮ್ಮಿಕೊಂಡಿದ್ದ ಕೃಷ್ಣಾ ನದಿ ತೀರದಲ್ಲಿ ನಡೆಯುತ್ತಿರುವ ಅಕ್ರಮ ಮಣ್ಣು ಸಾಗಾಟ ತಡೆಗೆ ಆಗ್ರಹಿಸಿ ಒಂದು ದಿನದ ಸಾಂಕೇತಿಕ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ನದಿಪಾತ್ರದ ಮಣ್ಣನ್ನು 20ಕ್ಕೂ ಹೆಚ್ಚು ಟಿಪ್ಪರ್ ಬಳಸಿ ಹಿಟಾಚಿ ಯಂತ್ರದಿಂದ ಸಾಗಿಸಲಾಗುತ್ತಿದೆ. ಆಳವಾದ ಗುಂಡಿಗಳು ಬಿದ್ದಿದ್ದು ಭವಿಷ್ಯದಲ್ಲಿ ನದಿಯ ಹರಿವಿನ ದಿಕ್ಕು ಬದಲಾಗುವ ಸಾಧ್ಯತೆಯೂ ಇದೆ. ಮಣ್ಣು ಗುಣಮಟ್ಟದ್ದಾಗಿದೆಯೋ ಇಲ್ಲವೋ ಎಂಬುದನ್ನು ಕೃಷಿ ವಿಜ್ಞಾನಿಗಳಿಂದ ತಪಾಸಣೆ ಮಾಡಿಸಿದ್ದೀರಾ? ಟಿಪ್ಪರ್ ಒಂದಕ್ಕೆ 2-3 ಸಾವಿರದಂತೆ ರೈತರ ಜಮೀನುಗಳಿಗೆ ಕಾನೂನು ಬದ್ಧವಾಗಿ ಅಧಿಕಾರಿಗಳ ಅನುಮತಿ ಪಡೆದುಕೊಂಡು ಮಣ್ಣು ಸಾಗಿಸಿದರೆ ನಮ್ಮ ವಿರೋಧವಿಲ್ಲ ಎಂದು ಅವರು ಹೇಳಿದರು. ಬಾಲಾಜಿ ಸಕ್ಕರೆ ಕಾರ್ಖಾನೆಗೆ ಸಂಬಂಧಿಸಿದಂತೆ ಈಗ ಧ್ವನಿ ಎತ್ತುವ ರೈತ ಸಂಘದವರು ಕಾರ್ಖಾನೆ ಎದುರಿಗೆ ಕಬ್ಬು ತೂಕದ ಯಂತ್ರ ಹಾಕುವುದಕ್ಕೆ ಸಿದ್ಧರಿದ್ದರೆ ನಾನು ಕೈ ಜೋಡಿಸುತ್ತೇನೆ. ಯಂತ್ರದಲ್ಲಿ ಆಗುವ ಮೋಸದ ಕುರಿತು ರೈತ ಸಂಘದವರಿಗೆ ಅರಿವು ಇಲ್ಲವೇ? ಅದರ ಬಗ್ಗೆ ಯಾಕೆ ಧ್ವನಿ ಎತ್ತುವುದಿಲ್ಲ ಎಂದು ಪ್ರಶ್ನಿಸಿದರು.
ಹೋರಾಟದ ನೇತೃತ್ವ ವಹಿಸಿದ್ದ ತಂಗಡಗಿ ಗ್ರಾಪಂ ಮಾಜಿ ಅಧ್ಯಕ್ಷ ಸಂಗಯ್ಯ ಸಾರಂಗಮಠ, ವಾಲ್ಮೀಕಿ ಸಮಾಜದ ಯುವ ಮುಖಂಡ ಶಿವು ಕನ್ನೊಳ್ಳಿ ಮಾತನಾಡಿ, ನದಿ ಪಾತ್ರದಲ್ಲಿ ಉಸುಕು ದೊರೆಯುತ್ತಿದ್ದು ರೈತರ ಹೆಸರಲ್ಲಿ ಟಿಪ್ಪರ್ ಮಾಲೀಕರು ಅಕ್ರಮವಾಗಿ ಮಣ್ಣು ಸಾಗಿಸಿ ಲಾಭ ಮಾಡಿಕೊಳ್ಳುತ್ತಿದ್ದಾರೆ. ಅಕ್ರಮವಾಗಿ ಮಣ್ಣು ಸಾಗಿಸಿದರೆ ಭವಿಷ್ಯದಲ್ಲಿ ನದಿ ತೀರದ ಅಕ್ಕಪಕ್ಕದ ಜಮೀನುಗಳಲ್ಲಿ ನೀರಿನ ಬಸಿ ಇಟ್ಟು ಸವಳು ಜವಳು ಸಮಸ್ಯೆ ಸೃಷ್ಟಿಯಾಗುತ್ತದೆ. ನೈಸರ್ಗಿಕ ಸಂಪತ್ತು ಉಳಿಸಬೇಕಾದ ಅಧಿಕಾರಿಗಳು ಒಬ್ಬರ ಮೇಲೊಬ್ಬರು ಬೆರಳು ತೋರಿಸುತ್ತಿದ್ದು ಹೋರಾಟಗಾರರಿಗೂ ರಕ್ಷಣೆ ಕೊಡುತ್ತಿಲ್ಲ ಎಂದು ದೂರಿದರು.
ಧರಣಿ ಸ್ಥಳಕ್ಕೆ ತಹಸೀಲ್ದಾರ್ ಅನುಪಸ್ಥಿತಿಯಲ್ಲಿ ಶಿರಸ್ತೇದಾರ ಎಂ. ಎಸ್. ಬಾಗೇವಾಡಿ ಆಗಮಿಸಿ ತಹಸೀಲ್ದಾರ್‌ರು ಕೆಬಿಜೆಎನ್‌ಎಲ್ ಅಧಿಕಾರಿಗಳಿಗೆ ಬರೆದ ಪತ್ರವನ್ನು ನೀಡಿದರು. ಪೊಲೀಸ್ ಇಲಾಖೆಯಿಂದಲೂ ಹೋರಾಟಗಾರ ಸಂಗಯ್ಯ ಸಾರಂಗಮಠ ಅವರಿಗೆ ನೋಟಿಸ್ ನೀಡಲಾಯಿತು. ಹೋರಾಟದಲ್ಲಿ ಅಂಬೇಡ್ಕರ್ ಸೇನೆ ತಾಲ್ಲೂಕು ಅಧ್ಯಕ್ಷ ಪ್ರಕಾಶ ಚಲವಾದಿ, ಚಂದ್ರು ಹಡಪದ, ಅಜಯಕುಮಾರ ಕೋಟಿಖಾನಿ, ಕಾಶಿಮಸಾಬ ಗಂಗೂರ, ಬಾಬು ತೆಗ್ಗಿನಮನಿ, ಗಂಗು ಗಂಗನಗೌಡ್ರ, ರಾಜು ಮಸಿಬಿನಾಳ, ಶಿವು ವಣಕಿಹಾಳ ಮೊದಲಾದವರು ಇದ್ದರು. ತಾಲ್ಲೂಕು ಆಡಳಿತ ಮಣ್ಣು ಅಕ್ರಮ ಸಾಗಾಟದ ಕುರಿತು ಯಾವುದೇ ಕ್ರಮ ಕೈಗೊಳ್ಳದೇ ಮೌನಕ್ಕೆ ಶರಣಾಗಿರುವುದನ್ನು ಖಂಡಿಸಿ ಮೂರು ಕೋತಿಗಳನ್ನು ಚಿತ್ರಿಸಿದ ಬ್ಯಾನರ್ ಅಳವಡಿಸಿ ತಾಲ್ಲೂಕಿನಲ್ಲಿ ಏನೇ ನಡೆದರೂ ಪ್ರಶ್ನಿಸಬಾರದು ಕಿವಿ, ಬಾಯಿ, ಕಣ್ಣು ಮುಚ್ಚಿಕೊಂಡು ಮೌನವಾಗಿರಬೇಕು ಎಂಬಂತೆ ವಿನೂತನವಾಗಿ ಪ್ರತಿಭಟಿಸಲಾಯಿತು.