
ಮುದ್ದೇಬಿಹಾಳ : ಮೊದಲು ಸಂಸ್ಕಾರ ಹೆಚ್ಚಾಗಿತ್ತು,ಶಿಕ್ಷಣ ಕಡಿಮೆ ಇತ್ತು. ಆದರೆ ಇಂದು ಶಿಕ್ಷಣ ಹೆಚ್ಚಿದಂತೆ ಸಂಸ್ಕಾರದ ಕೊರತೆ ಕಂಡು ಬರುತ್ತಿದೆ ಎಂದು ಹುನಗುಂದ-ಮುದ್ದೇಬಿಹಾಳ ಹೊಸಮಠದ ಅಮರೇಶ್ವರ ಸ್ವಾಮೀಜಿ ಹೇಳಿದರು.

ತಾಲ್ಲೂಕು ನಾಗರಬೆಟ್ಟದ ಆಕ್ಸಫರ್ಡ ಮಠ್ಸ್ ಸಮೂಹ ಶಿಕ್ಷಣ ಸಂಸ್ಥೆಯಿಂದ ಎಕ್ಸಪರ್ಟ್ ಪಿಯು ಸೈನ್ಸ್ ಕಾಲೇಜಿನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಟ್ಯಾಲೆಂಟ್ ಅವಾರ್ಡ್ ಪರೀಕ್ಷೆಯಲ್ಲಿ ವಿಜೇತರ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಗ್ರಾಮೀಣ ಭಾಗದಲ್ಲಿ ಬಡ ಮಕ್ಕಳ ಶೈಕ್ಷಣಿಕ ಏಳ್ಗೆಗೆ ಶ್ರಮಿಸುತ್ತಿರುವ ಆಕ್ಸಫರ್ಡ್ ಮಠ್ಸ್ ಶಿಕ್ಷಣ ಸಂಸ್ಥೆಯಿಂದ ಸಾವಿರಾರು ಮಕ್ಕಳ ಭವಿಷ್ಯಕ್ಕೆ ಅಕ್ಷರದ ಜ್ಯೋತಿ ಪ್ರೇರಣೆಯಾಗಿದೆ ಎಂದರು.
ಸಂಸ್ಥೆಯ ಚೇರಮನ್ ಬಿ.ಜಿ.ಮಠ ಮಾತನಾಡಿ, ನಮ್ಮ ವಿದ್ಯಾ ಸಂಸ್ಥೆಯಲ್ಲಿ ಗ್ರಾಮೀಣ ಪ್ರದೇಶದ ಪ್ರತಿಭಾವಂತ ವಿದ್ಯಾರ್ಥಿಗಳು ಮೆಡಿಕಲ್ ಸೀಟು ಪಡೆದುಕೊಂಡು ಪಾಲಕರ ವೈದ್ಯಕೀಯ ಶಿಕ್ಷಣದ ಕನಸನ್ನು ನನಸು ಮಾಡುತ್ತಿದ್ದಾರೆ. ಎಸ್.ಎಸ್.ಎಲ್.ಸಿ, ಪಿಯುಸಿಯಲ್ಲೂ ಉತ್ತಮ ಅಂಕಗಳನ್ನು ಪಡೆದು ರಾಜ್ಯಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಗುಣಮಟ್ಟದ ಶಿಕ್ಷಣದೊಂದಿಗೆ ಸಂಸ್ಕಾರ ನೀಡುವಲ್ಲಿಯೂ ಸಂಸ್ಥೆ ಮುಂದೆ ಇದೆ ಎಂದರು.
ರಕ್ಕಸಗಿ ಕೆಪಿಎಸ್ ಶಾಲೆ ಶಿಕ್ಷಕ ವಿ.ಎಸ್.ಮಳಗಿ ಮಾತನಾಡಿದರು. ವೇ. ಬಸವಪ್ರಭು ಹಿರೇಮಠ, ಢವಳಗಿ ಪಿಡಿಒ ಆನಂದ ಹಿರೇಮಠ, ಕಲಾಂ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಅಕ್ಬರ ಮುಲ್ಲಾ, ಪೀರಸಾಬ ಮುಲ್ಲಾ, ಬಸಯ್ಯ ಮಠ, ಹೀರೂ ನಾಯಕ, ಇರ್ಫಾನ ಬಾಗವಾನ, ಬಸಯ್ಯ ಪುರವಂತಮಠ, ಪ್ರಜ್ವಲ್ ಮಠ, ಸಿದ್ದಯ್ಯ ಮಠ, ರಾಚಯ್ಯ ಹಿರೇಮಠ ಮೊದಲಾದವರು ಇದ್ದರು.
ಟ್ಯಾಲೆಂಟ್ ಅವಾರ್ಡ್ ಪರೀಕ್ಷೆಯಲ್ಲಿ 25ಸಾವಿರ ನಗದು ಬಹುಮಾನದೊಂದಿಗೆ 2.50 ಲಕ್ಷ ರೂ. ಮೊತ್ತದ ಶಿಷ್ಯವೇತನದ ಬಹುಮಾನವನ್ನು ಯಾದಗಿರಿ ಜೆಎನ್‌ವಿ ಶಾಲೆ ರೇವಣಸಿದ್ದಪ್ಪ ಹಾಲ್ಯಾಳ ಪಡೆದುಕೊಂಡನು. ಇನ್ನುಳಿದ ಬಹುಮಾನಗಳನ್ನು ವಿಜೇತ ವಿದ್ಯಾರ್ಥಿಗಳಿಗೆ ಪ್ರದಾನ ಮಾಡಲಾಯಿತು. ಕಳೆದ ವರ್ಷ ಮೆಡಿಕಲ್ ಸೀಟು ಪಡೆದುಕೊಂಡ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.