
ಮುದ್ದೇಬಿಹಾಳ : ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ಒಟ್ಟು 65 ಉದ್ಯಾನವನಗಳನ್ನು ಹೊಂದಿದೆ ಎಂದು ಪೌರಾಡಳಿತ ಹಾಗೂ ಹಜ್ ಸಚಿವ ರಹೀಂಖಾನ್ ತಿಳಿಸಿದ್ದಾರೆ.

ವಿಧಾನಸಭೆಯಲ್ಲಿ ಕ್ಷೇತ್ರದ ಶಾಸಕ ಸಿ. ಎಸ್. ನಾಡಗೌಡ ಅಪ್ಪಾಜಿ ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಸಚಿವರು, 65 ಉದ್ಯಾನವನಗಳಲ್ಲಿ ಮುದ್ದೇಬಿಹಾಳ ಪಟ್ಟಣದ ವಾರ್ಡ ಸಂಖ್ಯೆ 1 ರಲ್ಲಿ ಬರುವ ವಿದ್ಯಾನಗರದಲ್ಲಿರುವ ಪೊಲೀಸ್ ಠಾಣೆ ಹಿಂಭಾಗದಲ್ಲಿ ಹಾಗೂ ವಾರ್ಡ ಸಂಖ್ಯೆ 9ರಲ್ಲಿ ಬರುವ ಬಸವ ನಗರದ ಉದ್ಯಾನವನಗಳನ್ನು ಕೃಷ್ಣಾ ಭಾಗ್ಯ ಜಲನಿಗಮದಿಂದ ಅಭಿವೃದ್ಧಿಪಡಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ಉತ್ತರಿಸಿದ್ದಾರೆ. ಬಾಕಿ ಉಳಿದಿರುವ ಉದ್ಯಾನವನಗಳ ಅಭಿವೃದ್ಧಿಗೊಳಿಸುವುದು, ಸಾರ್ವಜನಿಕರ ಅನುಕೂಲಕ್ಕೆ ಬಳಕೆಯಾಗುವಂತೆ ಪ್ರಸಕ್ತ ಸಾಲಿನಲ್ಲಿ ಎಷ್ಟು ಉದ್ಯಾನವನಗಳನ್ನು ಅಭಿವೃದ್ಧಿಪಡಿಸಲು ಅನುದಾನ ಮಂಜೂರಿ ಬಗ್ಗೆ ಕೇಳಿದ ಪ್ರಶ್ನೆಗೆ ಸರ್ಕಾರದಿಂದ ಮುಂಬರುವ ಅನುದಾನ ಹಾಗೂ ಪುರಸಭೆಯ ಸ್ವಂತ ನಿಧಿಯಡಿ ಉದ್ಯಾನವನಗಳನ್ನು ಅಭಿವೃದ್ಧಿಪಡಿಸಲು ಕ್ರಮವಹಿಸಲಾಗುವುದು ಎಂದು ಉತ್ತರಿಸಿದ್ದಾರೆ. ಆದರೆ ಸದ್ಯಕ್ಕೆ ಅಭಿವೃದ್ದಿಪಡಿಸುತ್ತಿರುವ ಉದ್ಯಾನವನಗಳನ್ನು ಎಷ್ಟು ಮೊತ್ತದಲ್ಲಿ ಅಭಿವೃದ್ಧಿಗೊಳಿಸಲಾಗುತ್ತಿದೆ ಎಂಬುದನ್ನು ಸಚಿವರು ತಮ್ಮ ಉತ್ತರದಲ್ಲಿ ನೀಡಿಲ್ಲ.
ಎಸ್ಸಿ.ಎಸ್ಟಿ ವಾರ್ಡ ಅಭಿವೃದ್ಧಿಗೆ 4.80 ಲಕ್ಷ ರೂ. ಅನುದಾನ
ಮತಕ್ಷೇತ್ರದ ತಾಳಿಕೋಟಿ ಪುರಸಭೆಗೆ ಸೇರಿದ ವಿಶೇಷ ಘಟಕ ಯೋಜನೆಯಡಿ ಎಸ್.ಸಿ.ಎಸ್.ಪಿ ಪರಿಶಿಷ್ಟ ಜಾತಿ ಕಾಲೋನಿಯಲ್ಲಿ ಮೂಲಭೂತ ಸೌರ‍್ಯ ಒದಗಿಸಲು ಸನ್ 2024-25ನೇ ಸಾಲಿನಲ್ಲಿ ನಗರಾಭಿವೃದ್ಧಿ ಇಲಾಖೆಯು ತಾಳಿಕೋಟಿ ಪುರಸಭೆಗೆ 4.80 ಲಕ್ಷ ರೂ.ಮಂಜೂರು ಮಾಡಲಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಡಾ. ಎಚ್. ಸಿ. ಮಹದೇವಪ್ಪ ಶಾಸಕ ನಾಡಗೌಡರು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ.
ಐದು ಪ್ರಾಥಮಿಕ ಪಶು ಕೇಂದ್ರಗಳು ಮೇಲ್ದರ್ಜೆಗೆ: ಮುದ್ದೇಬಿಹಾಳ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರಗಳಾದ ಅ.ಸೋಮನಾಳ, ಇಂಗಳಗೇರಿ, ಕೊಣ್ಣೂರು, ಹಿರೇಮುರಾಳ, ದೇವರ ಹುಲಗಬಾಳದ ಕೇಂದ್ರಗಳನ್ನು ಪಶು ಚಿಕಿತ್ಸಾಲಯಗಳನ್ನಾಗಿ ಮೇಲ್ದರ್ಜೆಗೇರಿಸುವ ಪ್ರಸ್ತಾವನೆಗಳು ಸ್ವೀಕೃತಗೊಂಡಿದ್ದು ಪ್ರಸ್ತಾವನೆಗಳು ಪರಿಶೀಲನೆಯಲ್ಲಿರುತ್ತವೆ ಎಂದು ಪಶು ಸಂಗೋಪನಾ ಹಾಗೂ ರೇಷ್ಮೆ ಸಚಿವ ಕೆ.ವೆಂಕಟೇಶ ಶಾಸಕ ಅಪ್ಪಾಜಿ ನಾಡಗೌಡರು ಕೇಳಿದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಉತ್ತರಿಸಿದ್ದಾರೆ.