
ಮುದ್ದೇಬಿಹಾಳ : ರಸ್ತೆಯಲ್ಲಿ ಬೈಕ್ ತಗುಲಿದ ವಿಚಾರಕ್ಕೆ ನಡೆದ ವಾಗ್ವಾದ ವಿಕೋಪಕ್ಕೆ ತಿರುಗಿ ಇಬ್ಬರು ವ್ಯಕ್ತಿಗಳು ಮುಖ್ಯರಸ್ತೆಯಲ್ಲೇ ಹೊಡೆದಾಡಿಕೊಂಡಿರುವ ಘಟನೆ ಪಟ್ಟಣದಲ್ಲಿ ಸೋಮವಾರ ಸಾರ್ವಜನಿಕವಾಗಿ ನಡೆದಿದೆ.

ಪಟ್ಟಣದ ಐಶ್ವರ್ಯಾ ಹೊಟೇಲ್ ಮುಂಭಾಗದಲ್ಲಿ ಈ ಘಟನೆ ನಡೆದಿದ್ದು ಬೈಕ್ ತಗುಲಿದ್ದನ್ನು ಪ್ರಶ್ನಿಸಿದ್ದಕ್ಕೆ ಪರಸ್ಪರ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾ ಕೈಯ್ಯಲ್ಲಿದ್ದ ಬೈಕ್ ಚಾವಿಯಿಂದ ವ್ಯಕ್ತಿಯ ಕಿವಿಗೆ ಚುಚ್ಚಿದ್ದಾನೆ.
ಇದರಿಂದ ತೀವ್ರ ರಕ್ತಸ್ರಾವವಾಗಿದ್ದು ಹಾಕಿಕೊಂಡಿದ್ದ ಬಟ್ಟೆ ತುಂಬೆಲ್ಲಾ ರಕ್ತಸಿಕ್ತವಾಗಿತ್ತು. ಯುವಕನ ತಲೆಗೂ ಪೆಟ್ಟಾಗಿದ್ದು ಇಬ್ಬರು ವಾದವಿವಾದ ನಡೆಸುತ್ತಾ ಮುಖ್ಯರಸ್ತೆಯಲ್ಲಿ ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಪಡಿಸಿದ್ದರು. ಸಾರ್ವಜನಿಕರು ತಿಳಿಹೇಳಿದರೂ ಜಟಾಪಟಿ ಮುಂದುವರೆಸಿದ್ದರು. ತಕ್ಷಣ ಪೊಲೀಸರು ಸ್ಥಳಕ್ಕೆ ಆಗಮಿಸಿ ಯುವಕನನ್ನು ವಶಕ್ಕೆ ಪಡೆದುಕೊಂಡು ಠಾಣೆಗೆ ಕರೆದೊಯ್ದಿದ್ದಾರೆ.
ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ವ್ಯಕ್ತಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ಈ ಕುರಿತಂತೆ ಯಾವುದೇ ದೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿಲ್ಲ. ಮುಖ್ಯರಸ್ತೆಯ ದೊಡ್ಡ ದೊಡ್ಡ ಅಂಗಡಿಗಳ ಮುಂದೆ ಬೈಕ್‌ಗಳನ್ನು ಮನಬಂದಂತೆ ನಿಲುಗಡೆ ಮಾಡುತ್ತಿರುವ ಕಾರಣ ಪಾದಚಾರಿಗಳು ಸಂಚರಿಸುವುದೂ ಕಷ್ಟಕರ ಎನ್ನುವಂತ ಪರಿಸ್ಥಿತಿ ನಿರ್ಮಾಣವಾಗಿದ್ದು ಪೊಲೀಸ್ ಇಲಾಖೆ ಇದಕ್ಕೆ ಪರಿಹಾರ ಕಂಡು ಹಿಡಿದು ಸಾರ್ವಜನಿಕರ ಸಂಚಾರವನ್ನು ಸುಗಮಗೊಳಿಸಬೇಕಿದೆ ಎಂದು ನಾಗರಿಕರು ಒತ್ತಾಯಿಸಿದ್ದಾರೆ.