
ಮುದ್ದೇಬಿಹಾಳ : ತಾಲ್ಲೂಕಿನ ತಂಗಡಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಅಮರಗೋಳ ಗ್ರಾಮದ ಕೃಷ್ಣಾ ನದಿ ತೀರದಲ್ಲಿ ಕಪ್ಪು ಮಣ್ಣು ಅಕ್ರಮವಾಗಿ ಸಾಗಿಸಲಾಗುತ್ತಿದೆ ಎಂಬ ದೂರು ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಸೋಮವಾರ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಲೋಕಾಯುಕ್ತ ಪಿಐ ಆನಂದ ಠಕ್ಕನ್ನವರ, ಅನಧಿಕೃತವಾಗಿ ನದಿ ಪಾತ್ರದ ಮಣ್ಣು ಸಾಗಿಸಲಾಗುತ್ತಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ್ದೇವು. ನಾವು ಭೇಟಿ ಕೊಟ್ಟ ಸಮಯದಲ್ಲಿ ಸ್ಥಳದಲ್ಲಿ ಒಂದು ಹಿಟಾಚಿ, ಎರಡು ಟಿಪ್ಪರ್ ಕಂಡು ಬಂದಿವೆ. ಅಂದಾಜು 400ಕ್ಕೂ ಹೆಚ್ಚು ಟಿಪ್ಪರ್ ಮಣ್ಣನ್ನು ಸಾಗಿಸಲಾಗಿದೆ ಎಂದು ತಿಳಿಸಿದರು.
ಸಂಬಂಧಿಸಿದ ಅಧಿಕಾರಿಗಳಿಂದ ಯಾವುದೇ ಅನುಮತಿ ಪಡೆದುಕೊಂಡಿಲ್ಲ ಎಂಬುದು ಅಲ್ಲಿದ್ದವರನ್ನು ವಿಚಾರಿಸಿದಾಗ ತಿಳಿದು ಬಂದಿದೆ. ಈ ಕುರಿತು ನಮ್ಮ ಮೇಲಧಿಕಾರಿಗಳಿಗೆ ವರದಿ ಸಲ್ಲಿಸುತ್ತೇವೆ ಎಂದು ಹೇಳಿದರು. ತಂಗಡಗಿ ಗ್ರಾಮದ ಶುದ್ದ ಕುಡಿವ ನೀರು ಪೂರೈಸುವ ನೀರು ಶುದ್ಧೀಕರಣ ಘಟಕದಲ್ಲಿ ಪಾಚಿ ತುಂಬಿದ್ದು ಅದನ್ನು ಶುಚಿಗೊಳಿಸದೇ ಹಾಗೆ ಬಿಟ್ಟಿರುವುದು ಕಂಡು ಬಂದಿದೆ. ಈ ಬಗ್ಗೆ ಪಂಚಾಯಿತಿ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು ನೀರು ಪೂರೈಕೆಯಲ್ಲಿ ಶುಚಿತ್ವ ಕಾಪಾಡುವಂತೆ ತಿಳಿಸಲಾಗಿದೆ ಎಂದು ಹೇಳಿದರು.
ತಾಲ್ಲೂಕಾಡಳಿತಕ್ಕೆ, ಕೆಬಿಜೆಎನ್‌ಎಲ್‌ದವರಿಗೆ ಹಾಗೂ ಅಕ್ರಮವಾಗಿ ಮಣ್ಣು ಸಾಗಾಟದಲ್ಲಿ ತೊಡಗಿದವರಿಗೆ ನೋಟಿಸ್ ಕೊಡುವ ವಿಚಾರದ ಕುರಿತು ಮೇಲಧಿಕಾರಿಗಳು ತೀರ್ಮಾನ ಕೈಗೊಳ್ಳುತ್ತಾರೆ ಎಂದು ತಿಳಿಸಿದರು.ದೂರುದಾರ ಸಂಗಯ್ಯ ಸಾರಂಗಮಠ ಇದ್ದರು.