

ವಿಜಯಪುರ : ಮಂಗಳಮುಖಿಯರೇ ಮಂಗಳಮುಖಿಯನ್ನು ಹಾಡಹಗಲೇ ಸಾರ್ವಜನಿಕವಾಗಿ ವಿವಸ್ತ್ರಗೊಳಿಸಿ ಹಲ್ಲೆ ನಡೆಸಿರುವ ಅಮಾನವೀಯ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ನಗರದ ಕೇಂದ್ರ ಬಸ್ ನಿಲ್ದಾಣದ ಪರಿಸರದಲ್ಲಿ ಪ್ಯಾಂಟ್ ಶರ್ಟ್ ಧರಿಸಿದ್ದ ಮಂಗಳಮುಖಿ ಹಣ ಪಡೆಯುತ್ತಿದ್ದಾಗ ಆಕೆಯನ್ನು ಬೆನ್ನಟ್ಟಿ ಅಟ್ಟಾಡಿಸಿದ ಮಂಗಳಮುಖಿಯರ ಗುಂಪು, ಅಮಾನವೀಯ ರೀತಿಯಲ್ಲಿ ದೌರ್ಜನ್ಯ ಎಸಗಿದೆ. ಬೆತ್ತಲೆಗೊಳಿಸಿ, ಮರ್ಮಾಂಗಕ್ಕೆ ಖಾರದ ಪುಡಿ ಎರಚಿ ಮನಬಂದಂತೆ ಥಳಿಸಿದ್ದಾರೆ.
ಥಳಿತಕ್ಕೊಳಗಾದುದ್ದು ಮಂಗಳಮುಖಿಯಲ್ಲ. ಮಂಗಳಮುಖಿಯರ ರೀತಿಯಲ್ಲಿ ವರ್ತಿಸಿ ನಗರದಲ್ಲಿ ಹಣ ಎತ್ತುವಳಿ ನಡೆಸಿದ್ದಾಳೆ ಎಂಬುದು ಹಲ್ಲೆ ನಡೆಸಿರುವ ಮಂಗಳಮುಖಿಯರ ವಾದ. ಇಡೀ ದೌರ್ಜನ್ಯ ಘಟನೆಯ ವಿಡಿಯೋ ಇದೀಗ ವೈರಲ್ ಆಗಿದೆ.ಥಳಿತಕ್ಕೊಳಗಾದ ಮಂಗಳಮುಖಿ ಅಂಗಲಾಚಿ ಬೇಡಿಕೊಂಡರೂ ಸಹ ಬಿಡದ ಮಂಗಳಮುಖಿಯರು ಗುಂಪು ಸಂಪೂರ್ಣ ಬೆತ್ತಲೆಗೊಳಿಸಿ ಮನಬಂದಂತೆ ಹಲ್ಲೆ ಮಾಡುತ್ತಿದ್ದರೂ ಸಾರ್ವಜನಿಕರು ನೆರವಿಗೆ ಬಾರದೇ, ಘಟನೆಯನ್ನು ನೋಡುತ್ತ ನಿಂತಿರುವುದು ಕಂಡುಬಂದಿದೆ.
ಇದಲ್ಲದೇ ದೌರ್ಜನ್ಯ ಎಸಗಿದ ಗುಂಪಿನಲ್ಲಿದ್ದ ಕೆಲ ಮಂಗಳಮುಖಿಯರು ಸಾರ್ವಜನಿಕವಾಗಿ ತಮ್ಮ ಸೀರೆ ಎತ್ತಿ ಖಾಸಗಿ ಅಂಗ ತೋರಿಸಿ ಅಸಹ್ಯಕರ ರೀತಿಯಲ್ಲಿ ವಿಕೃತಿ ಮೆರೆದಿದ್ದಾರೆ.
ಈ ಅಮಾನವೀಯ ಘಟನೆ ಎರಡು ವಾರಗಳ ಹಿಂದೆಯೇ ನಡೆದಿದೆ ಎನ್ನಲಾಗಿದೆ. ಇಡೀ ಘಟನೆಯ ವಿಡಿಯೋ ವೈರಲ್ ಆಗಿದ್ದರೂ ಪೊಲೀಸ್ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲು ಆಗಿಲ್ಲ.