ಮುದ್ದೇಬಿಹಾಳ : ಒಳಮೀಸಲಾತಿ ಜಾರಿಗೊಳಿಸುವಂತೆ ಆಗ್ರಹಿಸಿ ನಡೆದಿರುವ ಹೋರಾಟ ತೀವ್ರಗೊಳಿಸಲು ಆ.1 ರಂದು ರಾಜ್ಯಾದ್ಯಂತ ಮಾದಿಗ ಮೀಸಲಾತಿ ಹೋರಾಟ ಸಮೀತಿ ನೇತೃತ್ವದಲ್ಲಿ ಸರ್ಕಾರದ ಅಣುಕು ಶವಯಾತ್ರೆ ನಡೆಸಲಾಗುವುದು ಎಂದು ಮಾದಿಗ ಮೀಸಲಾತಿ ಹೋರಾಟ ಸಮೀತಿ ಮುಖಂಡ ಮಾರುತಿ ಸಿದ್ದಾಪೂರ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಆ.1 ರಂದು ಮುದ್ದೇಬಿಹಾಳ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಅಣಕು ಶವಯಾತ್ರೆ ಬೆಳಗ್ಗೆ 11ಕ್ಕೆ ಆರಂಭಿಸಲಾಗುತ್ತಿದ್ದು ಅಲ್ಲಿಂದ ಸಂಗೊಳ್ಳಿ ರಾಯಣ್ಣ ವೃತ್ತ, ಬಸ್ ನಿಲ್ದಾಣ, ಬಸವೇಶ್ವರ ವೃತ್ತದಲ್ಲಿ ಸರ್ಕಾರದ ಅಣಕು ಶವವನ್ನು ದಹಿಸಲಾಗುತ್ತದೆ. ನಂತರ ಮೆರವಣಿಗೆ ಮೂಲಕ ತಹಸಿಲ್ದಾರ್ ಕಚೇರಿಗೆ ತೆರಳಿ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ವಕೀಲ ಕೆ.ಬಿ.ದೊಡಮನಿ ಮಾತನಾಡಿ, ಸುಪ್ರೀಂಕೋರ್ಟ್ ಒಳಮೀಸಲಾತಿ ಸೌಲಭ್ಯ ಕಲ್ಪಿಸುವಂತೆ ರಾಜ್ಯ ಸರ್ಕಾರದಿಂದ ವರದಿ ನೀಡುವಂತೆ ಸೂಚನೆ ಮಾಡಿದ್ದರೂ ಅದಕ್ಕೆ ಸ್ಪಂದಿಸದೇ ಇರುವುದು ಸರ್ಕಾರದ ಬೇಜವಾಬ್ದಾರಿತನಕ್ಕೆ ಹಿಡಿದು ಕೈಗನ್ನಡಿ ಎಂದು ಆರೋಪಿಸಿದರು.
ಮುಖಂಡರಾದ ಬಸವರಾಜ ವಣಕಿಹಾಳ, ಬಾಲಚಂದ್ರ ಹುಲ್ಲೂರ, ಶೇಖಪ್ಪ ಮಾದರ, ಆನಂದ ಮುದೂರ, ದುರ್ಗಪ್ಪ ಮಾದರ ಮಾತನಾಡಿದರು. ಮುಖಂಡರಾದ ಬಸಪ್ಪ ಕವಡಿಮಟ್ಟಿ, ಗುರು ಚಲಮಿ,ಮಲ್ಲಪ್ಪ ಬಸರಕೋಡ, ಶಂಕ್ರಪ್ಪ ಪೂಜಾರಿ, ಯಮನಪ್ಪ ಮಾದರ ಮೊದಲಾದವರು ಇದ್ದರು.