ಮುದ್ದೇಬಿಹಾಳ : ಪಟ್ಟಣದ ಹೃದಯ ಭಾಗದಲ್ಲಿರುವ ಬಜಾರ ಸರ್ಕಾರಿ ಉರ್ದು ಶಾಲೆಯನ್ನು ಪುನಃ ಆರಂಭಿಸಬೇಕು ಎಂದು ಆಗ್ರಹಿಸಿ ಇಂದು ಮುದ್ದೇಬಿಹಾಳದ ಕ್ಷೇತ್ರಶಿಕ್ಷಣಾಧಿಕಾರಿಗಳ ಕಾರ್ಯಾಲಯ ಎದುರಿಗೆ ಕರ್ನಾಟಕ ಮುಸ್ಲಿಂ ಕೌನ್ಸಿಲ್ ಹಾಗೂ ಶಾಲೆಯ ಹಳೆ ವಿದ್ಯಾರ್ಥಿಗಳ ಕೂಟದ ಸಹಯೋಗದಲ್ಲಿ ಬುಧವಾರ ಧರಣಿ ಸತ್ಯಾಗ್ರಹ ನಡೆಸಲಾಯಿತು.
ಕೆ.ಎಂ.ಸಿ ಮುಖಂಡ ಕೆ.ಎಂ.ರಿಸಾಲ್ದಾರ ಮಾತನಾಡಿ, ಈಗಾಗಲೇ ಈ ಶಾಲೆಯನ್ನು ಡೈಸ್ ಕೋಡ ನೆಪದಲ್ಲಿ ಆರಂಭಿಸಲಾಗುತ್ತಿಲ್ಲ. ಜೊತೆಗೆ ಈ ಶಾಲೆಯನ್ನು ಪುರಸಭೆ ಸುಪರ್ದಿಗೆ ಹಸ್ತಾಂತರಿಸಲಾಗುತ್ತಿದೆ. ಇದು ಕಾನೂನು ಬಾಹಿರವಾಗಿದ್ದು, ಕೂಡಲೇ ಸರ್ಕಾರ ಇದನ್ನು ತಡೆದು, ಇಲ್ಲಿ ಪುನಃ ಉರ್ದು ಶಾಲೆ ಆರಂಭಿಸಬೇಕು. ಈ ಜಾಗವನ್ನು ಶಾಲೆಗಾಗಿಯೇ ದಾನ ಮಾಡಿದ್ದಾರೆ. ಹಾಗಾಗಿ ಈ ಜಾಗ ಶಾಲೆಗೆ ಸೀಮಿತವಾಗಿದ್ದು, ಶಾಲೆ ಶಾಲೆಯಾಗಿಯೇ ಉಳಿಯಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಧರಣಿ ಸ್ಥಳಕ್ಕೆ ಆಗಮಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಸ್. ಸಾವಳಗಿ ಅವರು, ನಾನು ಈಗಾಗಲೆ ಈ ಶಾಲೆ ಆರಂಭಕ್ಕೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದಿದ್ದೇನೆ ಎನ್ನುತ್ತಿದ್ದಂತೆ ಆಕ್ರೋಶಗೊಂಡ ಹೋರಾಟಗಾರರು ಈ ಶಾಲೆ ಸ್ಥಳಾಂತರವಾಗುತ್ತಿದ್ದರೂ ಮೌನ ವಹಿಸಿದ್ದೇಕೆ ಎಂದು ತರಾಟೆಗೆ ತೆಗೆದುಕೊಂಡರು.
ಆಗ ಸ್ಥಳದಲ್ಲಿಯೇ ಬಿಇಓ ಅವರು ಡಿಡಿಪಿಐ ಅವರೊಂದಿಗೆ ಮಾತನಾಡಿ ಸೂಕ್ತ ಕ್ರಮ ಜರುಗಿಸುವ ಭರವಸೆ ಮೇರೆಗೆ ಹೋರಾಟಗಾರರು ಧರಣಿಯನ್ನು ತಾತ್ಕಾಲಿಕವಾಗಿ ಹಿಂಪಡೆದರು.
ಒಂದು ವಾರದೊಳಗೆ ಶಾಲೆಯನ್ನು ಆರಂಭಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಕಾರ್ಯಪೃತ್ತರಾಗಬೇಕು, ಜೊತೆಗೆ ಡಿಡಿಪಿಐ ಅವರು ತಿಳಿಸಿದ ಹಾಗೇ ಶಾಲೆ ಆರಂಭಕ್ಕೆ ಪ್ರಸ್ತಾವನೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳು ಕಳಿಸಬೇಕು ಎಂದು ತಿಳಿಸಿದರು.
ನಿವಾಸಿಗಳಾದ ಎಲ್.ಎಮ್.ನಾಯ್ಕೋಡಿ, ದಾವಲ ಸಾತಿಹಾಳ, ತೆಗ್ಗಿ ಹಾಜಿ, ರಿಯಾಜ್ ಮುಲ್ಲಾ, ಹುಸೇನಬಾಷಾ ಮುಲ್ಲಾ, ಇಸ್ಮಾಯಿಲ್ ಅವಟಿ, ಹೆಚ್. ಆರ್. ಬಾಗವಾನ, ಅಶ್ಫಾಕ್ ಮುಲ್ಲಾ ಸೇರಿದಂತೆ ಇತರರು ಉಪಸ್ಥಿತರಿದ್ದರು.