ಚಾಮರಾಜನಗರ : ಪತ್ರಕರ್ತರು ಒಗ್ಗಟ್ಟಾಗದಿದ್ದರೆ ರಾಜಕಾರಣಿಗಳು ನಿಮ್ಮಗಳ ಮೇಲೆ ಸವಾರಿ ಮಾಡುವರು ಎಂದು ವಿಧಾನ ಪರಿಷತ್ ಸದಸ್ಯ ಕೆ.ಶಿವಕುಮಾರ್ ಚಾಮರಾಜನಗರದಲ್ಲಿ ಹೇಳಿದರು.
ಚಾಮರಾಜನಗರದ ಜೋಡಿ ರಸ್ತೆಯಲ್ಲಿರುವ ವರ್ತಕರ ಭವನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಪತ್ರಕರ್ತರಾದವರು ಸಮಾಜದಲ್ಲಿ ಒಗ್ಗಟ್ಟಿನಿಂದ ಇದ್ದರೆ ಗೌರವ ಸಿಗಲಿದೆ ಹೇಳಿದ ಕೆ. ಶಿವಕುಮಾರ್, ಪತ್ರಕರ್ತರಿಗೆ ಸೌಲಭ್ಯ ನೀಡುವ ವಿಚಾರದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕೆಲ ಅಧಿಕಾರಿ ವರ್ಗ ಕಡಿವಾಣ ಹಾಕಲು ಮುಂದಾಗುತ್ತಿರುವುದು ಸರಿಯಲ್ಲ ಎಂದು ಹೇಳಿದರು.
ರಾಜ್ಯ ಸರ್ಕಾರ ಮಾನ್ಯತೆ ಪಡೆದ ಪತ್ರಕರ್ತರಿಗೆ ಬಸ್ ಪಾಸ್, ಆರೋಗ್ಯ ಸಂಜೀವಿನಿ ಮತ್ತು ಮಾಸಾಸನ ನೀಡಲು ಮುಂದಾಗಿದೆ. ಆದರೆ, ಕೆಲ ಅಧಿಕಾರಿಗಳು ಸರ್ಕಾರದ ಪತ್ರಕರ್ತರಿಗೆ ಸಿದ್ದಪಡಿಸಿರುವ ಯೋಜನೆಗಳನ್ನು ಅನುಷ್ಠಾನಗೊಳಿಸಲು ಕಠಿಣ ಷರತ್ತುಗಳನ್ನು ವಿಧಿಸಿ ಕಡಿವಾಣ ಹಾಕುತ್ತಿದ್ದಾರೆ. ಇದು ಯಾವ ನ್ಯಾಯ, ಲಕ್ಷಾಂತರ ರು. ಸಂಬಳ ತೆಗೆದುಕೊಳ್ಳುವ ವಾರ್ತಾ ಇಲಾಖೆಯ ಅಧಿಕಾರಿಗಳಿಗೆ ಪಿಂಚಣಿ ಬೇಕು. ಆದರೆ ಪತ್ರಕರ್ತರು 40 ಸಾವಿರ ಸಂಬಳ ಮೀರಿರುವವರಿಗೆ ಪಿಂಚಣೆ ಕೊಡಲ್ಲ ಎಂದಿದ್ದಾರೆ. ಪತಕರ್ತರು 20, 30, 10 ಸಾವಿರ ಸಂಬಳದಲ್ಲೇ ದುಡಿಯಬೇಕಾ ? ಎಂದು ಖಾರವಾಗಿ ಪ್ರಶ್ನಿಸಿ, ಅಧಿಕಾರಿಗಳ ಇಂತಹ ತಾರತಮ್ಯದ ಬಗ್ಗೆ ಮುಂದಿನ ಅಧಿವೇಶದಲ್ಲೇ ಚರ್ಚಿಸುವೆ. ವಾರ್ತಾ ಖಾತೆ ಹೊಂದಿರುವ ಮುಖ್ಯಮಂತಿಗಳ ಗಮನಕ್ಕೆ ತಂದು ಪತ್ರಕರ್ತರಿಗೆ ನ್ಯಾಯ ಒದಗಿಸುವ ದೃಷ್ಟಿಯಲ್ಲಿ ಕೆಲಸ ಮಾಡುವೆ ಎಂದರು.
ವಾರ್ತಾ ಇಲಾಖೆಯ ಹೊಸ ಜಾಹೀರಾತು ನೀತಿ ಬಗ್ಗೆ ತಾನು ಎನ್‌ಸಿ, ಎಸ್‌ಟಿ, ಓಬಿಸಿ ಪತ್ರಿಕೆಗಳಿಗೆ ಹೆಚ್ಚುವರಿ ಜಾಹೀರಾತು ಕೊಡಬೇಕು ಎಂದು ಹೇಳಿದ್ದೇನೆ. ಎಲ್ಲ ಪತ್ರಿಕೆಗಳಿಗೂ ಜಾಹೀರಾತು ಕೊಡಬೇಕು. ಜಾಹೀರಾತು ಇಲ್ಲದೆ ಪತ್ರಿಕೆಗಳನ್ನು ನಡೆಸು ವುದು ಕಷ್ಟ ಪತ್ರಕರ್ತರಿಗೂ ನ್ಯಾಯಯುತ ವೇತನ ಸಿಗಬೇಕು ಎಂಬುದು ನಮ್ಮ ಆಶಯವಾಗಿದೆ ಎಂದರು.
ಮಾಧ್ಯಮ ಅಕಾಡೆಮಿ ಸದಸ್ಯನಾಗಿದ್ದಾಗ ಚಾಮರಾಜನಗರ ಜಿಲ್ಲೆಯಿಂದ ಅರ್ಜಿ ಹಾಕದವರಿಗೂ ಪ್ರಶಸ್ತಿ ಕೊಡಿಸಿದೆ. ಕಳೆದ ಐದಾರು ವರ್ಷಗಳಿಂದ ಜಿಲ್ಲೆಗೆ ಪ್ರಶಸ್ತಿ ಸಿಕ್ಕಿಲ್ಲ ಮುಂದಿನ ಸಲ ಕೊಡಿಸಲಾಗುವುದು ಎಂದು ಹೇಳಿದ ಕೆ.ಶಿವಕುಮಾರ್, ಜಿಲ್ಲಾ ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿ ಸ್ಥಾಪಿಸುವುದು ಒಳ್ಳೆಯದು ಅದಕ್ಕೆ ತಾನು ವೈಯುಕ್ತಿಕವಾಗಿ 25 ಸಾವಿರ ರೂಪಾಯಿಗಳನ್ನು ಕೊಡುತ್ತೇನೆ . ಪತ್ರಕರ್ತರು ಮತ್ತು ಕುಟುಂಬಕ್ಕೆ ಆರೋಗ್ಯ ಭದ್ರತೆ ಇರಬೇಕು. ಎಲ್ಲ ಪತ್ರಕರ್ತರು ವಿಮೆ ಮಾಡಿಸಿ ಕೊಳ್ಳಬೇಕು. ಅನಾರೋಗ್ಯದಿಂದ ಬಳಲಿ ಚಿಕಿತ್ಸಾ ವೆಚ್ಚ 3 ಲಕ್ಷ ರೂಪಾಯಿಗಳಿಗೂ ಬಂದರೆ ನನಗೆ ತಿಳಿಸಿದರೆ ಮುಖ್ಯ ಮಂತ್ರಿ ಪರಿಹಾರ ನಿಧಿಯಿಂದ ಭರಿಸಿಕೊಡುವುದಾಗಿ ಭರವಸೆ ನೀಡಿದರು.
ಮಾಜಿ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಹಾಲಿ ಶಾಸಕ ಸಿ. ಪುಟ್ಟರಂಗಶೆಟ್ಟಿ ಮಾತನಾಡಿ, ಪತ್ರಿಕಾರಂಗ ಸಮಾಜ, ಸರ್ಕಾರವನ್ನು ಕಣ್ಣೆರೆಸುವ ಕೆಲಸ ಮಾಡುತ್ತದೆ. ಪತ್ರಿಕಾರಂಗವು ಸಂವಿಧಾನದ 4ನೇ ಅಂಗವಾಗಿದೆ. ಪತ್ರಿಕಾ ರಂಗವು ಕಣ್ಣಿಗೆ ಕಾಣದ ಅಸ್ತ್ರವಾಗಿದ್ದು ಒಳ್ಳೆಯದು ಹಾಗೂ ಕೆಟ್ಟದ್ದನ್ನು ನೇರವಾಗಿ ಗುರ್ತಿ ಸುವ ಅಂಗವಾಗಿದೆ. ಟಿವಿ ಮಾಧ್ಯಮಗಳಲ್ಲಿ ತಪ್ಪು ಸುದ್ದಿಗಳು ಬಂದರೂ ಪತ್ರಿಕೆಗಳಲ್ಲಿ ನೇರವಾಗಿ ಬರುತ್ತದೆ ಎಂದರು.
ಕನ್ನಡಪ್ರಭ ಪತ್ರಿಕೆ ಮೈಸೂರು ಆವೃತ್ತಿಯ ಕಾರ್ಯನಿರ್ವಾಹಕ ಸಂಪಾದಕ ಅಂಶಿಪ್ರಸನ್ನಕುಮಾರ್, ಶಾಸಕ ಗಣೇಶ್ ಪ್ರಸಾದ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಕೆರಗೋಡು ಸೋಮಶೇಖರ್ ಟೆಲೆಕ್ ರವಿಕುಮಾರ್‌ಮಾತನಾಡಿದರು.
ಇದೇ ಸಂದರ್ಭದಲ್ಲಿ ಕನ್ನಡಪ್ರಭ ಪತ್ರಿಕೆ ಮೈಸೂರು ಆವೃತ್ತಿಯ ಕಾರ್ಯನಿರ್ವಾಹಕ ಸಂಪಾದಕ ಅಂಶಿಪ್ರಸನ್ನಕುಮಾರ್ ವಿಧಾನ ಪರಿಷತ್ ಸದಸ್ಯ ಕೆ. ಶಿವಕುಮಾರ್, ರವರನ್ನು ಸನ್ಮಾನಿಸಲಾಯಿತು.
2025-28 ನೇ ಸಾಲಿನ ಚಾಮರಾಜನಗರ ಜಿಲ್ಲಾ ಘಟಕ ಜಿಲ್ಲಾಧ್ಯಕ್ಷ ಅರ್.ಎನ್.ಸಿದ್ದಲಿಂಗಸ್ವಾಮಿ, ಪ್ರಧಾನ ಕಾರ್ಯದರ್ಶಿ ಲಕ್ಕೂರು ಪ್ರಸಾದ್, ಸಂಘದ ನಿಕಟಪೂರ್ವ ಅಧ್ಯಕ್ಷ ದೇವರಾಜ ಕಪ್ಪಸೋಗೆ, ಹಾಗೂ ಇನ್ನಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು.







