ಮುದ್ದೇಬಿಹಾಳ (ವಿಜಯಪುರ ) : ಪ್ರಸ್ತುತ ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ (KSAWU) ಬಯೋಇನ್ಫರ್ಮ್ಯಾಟಿಕ್ಸ್ ವಿಭಾಗದಲ್ಲಿ ಪೂರ್ಣಕಾಲಿಕ ಅತಿಥಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿರುವ ದೀಪಾ ಕೆ. ಸಿನ್ನೂರ ಅವರಿಗೆ ಬಿ.ಎಲ್.ಡಿ.ಇ. (ಪರಿಗಣಿತ ವಿಶ್ವವಿದ್ಯಾಲಯ) ಡಾಕ್ಟರೇಟ್ (ಪಿಎಚ್.ಡಿ.) ಪದವಿ ನೀಡಿ ಗೌರವಿಸಿದೆ.
ಈಚೇಗೆ ವಿಜಯಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಎಲ್ ಡಿಇ ವಿಶ್ವವಿದ್ಯಾಲಯದಿಂದ ಹಮ್ಮಿಕೊಂಡಿದ್ದ ಘಟಿಕೋತ್ಸವದಲ್ಲಿ ಡಾಕ್ಟರೇಟ್ ಪದವಿ ಪಡೆದುಕೊಂಡಿದ್ದಾರೆ.
ಇವರು ವಿಜಯಪುರದ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಅನಾಟಮಿ ಮತ್ತು ಅಲೈಡ್ ಹೆಲ್ತ್ ಸೈನ್ಸ್ (ಹ್ಯೂಮನ್ ಜೆನೆಟಿಕ್ಸ್) ವಿಭಾಗದಲ್ಲಿ “ಜೆನೆಟಿಕ್ ಪಾಲಿಮಾರ್ಫಿಸಂ ಆಫ್ LXR-ಆಲ್ಫಾ ಅಂಡ್ ABCA1 ಜೀನ್ಸ್ ಇನ್ ನಾರ್ತ್ ಕರ್ನಾಟಕ ಪಾಪ್ಯುಲೇಶನ್” (Genetic Polymorphism of LXR-alpha and ABCA1 Genes in North Karnataka Population) ಎಂಬ ವಿಷಯದ ಮೇಲೆ ಸುದೀರ್ಘ ಸಂಶೋಧನೆ ನಡೆಸಿದ್ದರು.
ಇವರು ಅನಾಟಮಿ ವಿಭಾಗದ ಮುಖ್ಯಸ್ಥರಾದ ಡಾ. ಆರ್. ಎಸ್. ಬುಳಗೌಡ ಅವರ ಮಾರ್ಗದರ್ಶನದಲ್ಲಿ ತಮ್ಮ ಸಂಶೋಧನಾ ಪ್ರಬಂಧವನ್ನು ಪೂರ್ಣಗೊಳಿಸಿದ್ದಾರೆ.ವಿಜಯಪುರದಲ್ಲಿ ಕಳೆದ ತಿಂಗಳು ನಡೆದ ಬಿ.ಎಲ್.ಡಿ.ಇ. (ಪರಿಗಣಿತ ವಿಶ್ವವಿದ್ಯಾಲಯ) ದ 13ನೇ ಘಟಿಕೋತ್ಸವ ಸಮಾರಂಭದಲ್ಲಿ ಗೌರವಾನ್ವಿತ ಕುಲಾಧಿಪತಿಗಳಾದ ಬಿ. ಎಂ. ಪಾಟೀಲ ಅವರು ದೀಪಾ ಅವರಿಗೆ ಅಧಿಕೃತವಾಗಿ ಪಿಎಚ್.ಡಿ. ಪದವಿ ಪ್ರದಾನ ಮಾಡಿದರು.
ಈ ಸಮಾರಂಭದಲ್ಲಿ ಕರ್ನಾಟಕ ಸರ್ಕಾರದ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸಚಿವರಾದ ಎಂ. ಬಿ. ಪಾಟೀಲ, ನವದೆಹಲಿಯ ನ್ಯಾಷನಲ್ ಮೆಡಿಕಲ್ ಕೌನ್ಸಿಲ್‌ನ ವೈದ್ಯಕೀಯ ಮೌಲ್ಯಮಾಪನ ಮತ್ತು ರೇಟಿಂಗ್ ಮಂಡಳಿಯ ಅಧ್ಯಕ್ಷರಾದ ಪ್ರೊ. ಡಾ. ಎಂ. ಕೆ. ರಮೇಶ್, ಉಪ-ಕುಲಾಧಿಪತಿ ಪ್ರೊ. ಡಾ. ವೈ. ಎಂ. ಜಯರಾಜ್, ಕುಲಪತಿ (ಪ್ರಭಾರ) ಪ್ರೊ. ಡಾ. ಅರುಣ್ ಇನಾಮದಾರ, ಕುಲಸಚಿವ ಪ್ರೊ. ಡಾ. ಆರ್. ವಿ. ಕುಲಕರ್ಣಿ, ಪರೀಕ್ಷಾ ನಿಯಂತ್ರಣಾಧಿಕಾರಿ ಪ್ರೊ. ಡಾ. ಎಸ್. ಎಸ್. ದೇವರಮನಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
—-
ದೀಪಾ ಸಿನ್ನೂರ ಮುದ್ದೇಬಿಹಾಳ ತಾಲ್ಲೂಕು ಯರಝರಿ ಜಿಲ್ಲಾ ಪಂಚಾಯಿತಿ ಸದಸ್ಯೆ ಪ್ರೇಮಾಬಾಯಿ ಚವ್ಹಾಣ ಅವರ ಸೊಸೆ, ವಿಜಯಪುರ ಜಿಲ್ಲಾ ಕಾಂಗ್ರೆಸ್ ಪಕ್ಷದ ಕಾರ್ಯದರ್ಶಿ ಸಂತೋಷ ಚವ್ಹಾಣ ಅವರ ಪತ್ನಿ.







