ಮುದ್ದೇಬಿಹಾಳ : ಶರಣರು ಮೂಢನಂಬಿಕೆಗಳನ್ನು ಧಿಕ್ಕರಿಸಿ ಜನರಲ್ಲಿ ವೈಜ್ಞಾನಿಕ ಮತ್ತು ವೈಚಾರಿಕ ಪ್ರಜ್ಞೆಯನ್ನು ಮೂಡಿಸಿದವರು ಎಂದು ಹಿರಿಯ ವಕೀಲ ಎನ್.ಆರ್.ಮೊಕಾಶಿ ಹೇಳಿದರು.
ಮಾಜಿ ಶಾಸಕ ದಿ.ಎಂ.ಎಂ.ಸಜ್ಜನ ಅವರ ಸ್ಮರಣಾರ್ಥ ಶರಣ ಸಾಹಿತ್ಯ ಪರಿಷತ್‌ನಿಂದ ಸಾರ್ವಜನಿಕ ವಾಚನಾಲಯದಲ್ಲಿ ಹಮ್ಮಿಕೊಂಡಿದ್ದ ಶರಣ ಬೆಳಗು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಲ್ಲು ದೇವರು ದೇವರಲ್ಲ, ಮಣ್ಣು ದೇವರು ದೇವರಲ್ಲ, ಮರದ ದೇವರು ದೇವರಲ್ಲ ಎಂದು ಹೇಳುವುದರ ಜೊತೆಗೆ ತನ್ನ ತಾನರಿದು ತಾನಾರೆಂದು ತಿಳಿದೊಡೆ ತಾನೇ ದೇವ ನೋಡಾ ಕೂಡಲಸಂಗಮದೇವ ಎಂದು ಜಗತ್ತಿಗೆ ಕರೆಕೊಟ್ಟವರು ಬಸವಣ್ಣನವರು. ಅನ್ಯಾಯದ ವಿರುದ್ಧ ನ್ಯಾಯವನ್ನು ಪ್ರತಿಪಾದಿಸಿದವರು,ಅಧರ್ಮದ ವಿರುದ್ಧ ಧರ್ಮವನ್ನು,ಅಸತ್ಯದ ವಿರುದ್ಧ ಸತ್ಯವನ್ನು ಪ್ರತಿಪಾದಿಸಿದವರು ಶರಣರು.ಕಟ್ಟಿದ ಲಿಂಗವನ್ನು ಬಿಟ್ಟು ಬೆಟ್ಟವನ್ನು ಸುತ್ತದೆ ಇಷ್ಟ ಲಿಂಗವನ್ನು ಪೂಜಿಸಲಿಕ್ಕೆ ಕರೆ ಕೊಟ್ಟವರು,ನಿರಾಕಾರ ದೇವರನ್ನು ಪೂಜಿಸಲು ಕರೆ ಕೊಟ್ಟವರು ಶರಣರಾಗಿದ್ದಾರೆ ಎಂದು ಹೇಳಿದರು.
ಕಸಾಪ ಮಾಜಿ ಅಧ್ಯಕ್ಷ ಎಂ.ಬಿ.ನಾವದಗಿ, ಕದಳಿ ವೇದಿಕೆ ಅಧ್ಯಕ್ಷೆ ಕಾಶೀಬಾಯಿ ರಾಂಪೂರ ಮಾತನಾಡಿ, ದಿ.ಎಂ.ಎಂ.ಸಜ್ಜನವರು ತಮ್ಮ ಅವಧಿಯಲ್ಲಿ ಸಲ್ಲಿಸಿದ ಸಾಮಾಜಿಕ ಕೆಲಸಗಳು ಇಂದಿಗೂ ಜನರು ಮರೆತಿಲ್ಲ ಎಂದರು.ಶಸಾಪ ಉಪಾಧ್ಯಕ್ಷ ಬಾಪುಗೌಡ ಪಾಟೀಲ ಬಸವಭಾವಪೂಜೆ ಮಾಡಿದರು.ಹಿರಿಯ ನ್ಯಾಯವಾದಿ ಬಸವರಾಜ ಸಜ್ಜನ, ಸಾರ್ವಜನಿಕ ವಾಚನಾಲಯದ ಅಧ್ಯಕ್ಷ ರುದ್ರಗೌಡ ಪಾಟೀಲ,ವೀರಶೈವ ವಿದ್ಯಾವರ್ಧಕ ಸಂಘದ ನಿರ್ದೇಶಕ ಅಪ್ಪಣ್ಣ ಹುನಗುಂದ, ಸಾರ್ವಜನಿಕ ವಾಚನಾಲಯದ ಸದಸ್ಯ ಎಸ್.ಪಿ.ಬಿರಾದಾರ(ಬಾಬು),ಶಸಾಪ ಅಧ್ಯಕ್ಷ ಬಸವರಾಜ ನಾಲತವಾಡ ಇದ್ದರು.







