
ಮುದ್ದೇಬಿಹಾಳ : ಬೆಳೆ ಸಮೀಕ್ಷೆದಾರರನ್ನು ಕಾಯಂಗೊಳಿಸುವುದು, ಜೀವ ವಿಮೆ ಒದಗಿಸುವುದು ಹಾಗೂ ಸೇವಾ ಭದ್ರತೆಗಾಗಿ ಆಗ್ರಹಿಸಿ ಕರ್ನಾಟಕ ಬೆಳೆ ಸಮೀಕ್ಷೆದಾರರ ಸಂಘದ ತಾಲ್ಲೂಕು ಘಟಕದ ಪದಾಧಿಕಾರಿಗಳು ಸೋಮವಾರ ತಹಸೀಲ್ದಾರ್‌ಗೆ ಮನವಿ ಪತ್ರ ಸಲ್ಲಿಸಿದರು.

ಸಂಘದ ಅಧ್ಯಕ್ಷ ರಮೇಶ ಇಂಗಳಗಿ ಮಾತನಾಡಿ, ಕಳೆದ ಏಳೆಂಟು ವರ್ಷಗಳಿಂದ ಬೆಳೆ ಸಮೀಕ್ಷೆದಾರರೆಂದು ಸೇವೆ ಸಲ್ಲಿಸುತ್ತಾ ಬಂದಿದ್ದೇವೆ. ಈ ಸಮಯದಲ್ಲಿ ಹೊಲದಲ್ಲಿ ವಿಷಜಂತುಗಳು, ಕಾಡುಪ್ರಾಣಿಗಳ ದಾಳಿಯಿಂದ ತೊಂದರೆಗೆ ಒಳಗಾಗಿದ್ದೇವೆ. ಹಿಂದೆ ಕಲಬುರ್ಗಿ ಜಿಲ್ಲೆ ಸೇಡಂ ತಾಲ್ಲೂಕಿನ ಮಳಖೇಡ ಹಾಗೂ ಕೋಡ್ಲಾ ಗ್ರಾಮದಲ್ಲಿ ಇಬ್ಬರು ಪಿಆರ್ ಬೆಳೆ ಸಮೀಕ್ಷೆದಾರರಿಗೆ ಹಾವು ಕಚ್ಚಿರುತ್ತದೆ. ಅದಕ್ಕೆ ಸಂಬಂಧಿಸಿದಂತೆ ಪರಿಹಾರ ನೀಡಿರುವುದಿಲ್ಲ. ಜೀವದ ಆಸೆ ಬಿಟ್ಟು ಶ್ರದ್ಧೆಯಿಂದ ಸೇವೆ ಮಾಡುತ್ತಿದ್ದೇವೆ ಎಂದು ಹೇಳಿದರು.
ಕೃಷಿ ಇಲಾಖೆಯಿಂದ ಗುರುತಿನ ಚೀಟಿ, ದಿನಗೂಲಿ ಆಧಾರದ ಮೇಲೆ ನಿತ್ಯ ಕೆಲಸ, ಜೀವ ವಿಮೆ ಹಾಗೂ ಎಲ್ಲ ಪಿ.ಆರ್‌ಗಳಿಗೆ ರೇನ್ ಕೋಟ್, ಶೂಗಳನ್ನು ನೀಡಬೇಕು ಎಂದು ಮನವಿ ಮಾಡಿದರು.
ಶಿರಸ್ತೇದಾರ ಎಂ. ಎಸ್. ಬಾಗೇವಾಡಿ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಸಂಘದ ಪದಾಧಿಕಾರಿಗಳಾದ ಬಸವರಾಜ ತಾರನಾಳ, ಸಲೀಮ ಮಕಾನದಾರ, ಬಸವರಾಜ ದೊಡಮನಿ, ವಿಠ್ಠಲ ಲಮಾಣಿ, ಪರಸಪ್ಪ ಹಾದಿಮನಿ, ಮಂಜುನಾಥ ಹರನಾಳ, ಭೀಮಣ್ಣ ಪೂಜಾರಿ ಮೊದಲಾದವರು ಇದ್ದರು. ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಿಗೂ ಪ್ರತ್ಯೇಕ ಮನವಿ ಪತ್ರ ಸಲ್ಲಿಸಿದರು.