ಬೆಳಗಾವಿ: “ರಾಜ್ಯದಲ್ಲಿ ಇನ್ನೂ ಭಾರಿ ಮಳೆಯಾಗುವ ಲಕ್ಷಣ ಇದ್ದು, ಇದರಿಂದ ಸಾಕಷ್ಟು ಅವಾಂತರಗಳು ಸೃಷ್ಟಿ ಆಗಲಿವೆ. ಕಾರ್ತಿಕ ಮಾಸದಲ್ಲಿ ತೊಂದರೆ ಆಗುವ ಲಕ್ಷಣ ತೋರುತ್ತಿದೆ. ಮಳೆ, ರೋಗದಿಂದ ದೇಶಕ್ಕೆ ಗಂಡಾಂತರವಿದ್ದು, ಮತ್ತೆ ತೊಂದರೆ ಆಗುತ್ತದೆ” ಎಂದು ಕೋಡಿಮಠದ ಶ್ರೀಗಳು ಭವಿಷ್ಯ ನುಡಿದರು.
ಬೆಳಗಾವಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕೋಡಿಮಠದ ಶ್ರೀಗಳು, ಪ್ರಾರಂಭದಲ್ಲೇ ನಾನು ಹೇಳಿದ್ದೆ. ಮಳೆ, ಗಾಳಿ, ಗುಡುಗು ಇದೆ. ಇದರಿಂದ ರಾಜ್ಯದಲ್ಲಿ ಹೆಚ್ಚಿನ ಅವಾಂತರ ಸೃಷ್ಟಿಸಲಿದೆ ಎಂದು ಹೇಳಿದ್ದೆ. ಬೆಂಕಿಯಿಂದ ಕಾಟ, ಮತಾಂಧತೆ ಹೆಚ್ಚಳ, ಸಾವು ನೋವುಗಳು ಆಗುತ್ತವೆ ಎಂದು ಮೊದಲೇ ಹೇಳಿದ್ದೆ. ಅಲ್ಲದೇ ಜನ ಅಶಾಂತಿಯಿಂದ ಇರುತ್ತಾರೆ ಎಂದು ತಿಳಿಸಿದ್ದೆ ಎಂದು ಕೋಡಿ ಶ್ರೀಗಳು ಹೇಳಿದರು.
ಭೂಮಿ ನಡುಗುತ್ತದೆ, ಕುಸಿಯುತ್ತದೆ ರೋಗ ಹೆಚ್ಚಾಗುತ್ತವೆ ಎಂದೂ ಹೇಳಿದ್ದೆ. ಅದರಂತೆ ವಿಶೇಷವಾಗಿ ಹಿಂದೆ ಹೇಳಿದಂತೆ ಕಾಡಿನಿಂದ ನಾಡಿಗೆ ಪ್ರಾಣಿಗಳು ಬರುತ್ತವೆ ಎಂದು ಎಚ್ಚರಿಕೆ ಕೂಡ ನೀಡಿದ್ದೆ ಎಂದರು.
ಈಗಲೂ ಅಂತಹ ಪರಿಸ್ಥಿತಿ ಇದೆ. ಕಾಡಿನಿಂದ ನಾಡಿಗೆ ಪ್ರಾಣಿಗಳು ಬರುತ್ತವೆ. ಭೂಮಿಯಲ್ಲಿ ಇರುವಂತೆ ವಿಷಜಂತು, ಪ್ರಾಣಿಗಳು ಹೊರಬಂದು ಜನರಿಗೆ ತೊಂದರೆ ಕೊಡುವ ಪ್ರಸಂಗ ಬಹಳ ಇದೆ. ಹಾಗಾಗಿ ಪ್ರಕೃತಿ ಅಲ್ಲೋಲ ಕಲ್ಲೋಲ ಆಗುವ ಪ್ರಸಂಗ ಹೆಚ್ಚಲಿದೆ ಎಂದು ಶ್ರೀಗಳು ಹೇಳಿದರು.
ಸಂವತ್ಸರದ ಕಡೆಯವರೆಗೂ ರಾಜ್ಯದಲ್ಲಿ ತೊಂದರೆ ಇರಲಿವೆ. ಅಚ್ಚರಿಯ ಅವಘಡ ಕಾದಿದೆ ಎಂದು ಈ ಹಿಂದೆ ಹೇಳಿದ್ದೆ. ಅದು ಕೂಡ ಆಗುತ್ತದೆ ಕಾದು ನೋಡಿ. ಅಲ್ಲದೇ ಬೆಂಕಿಯಿಂದ ಹೆಚ್ಚು ಸಮಸ್ಯೆ ಉಂಟಾಗಲಿದೆ. ಅಪಮೃತ್ಯು ಹೆಚ್ಚಾಗಲಿದೆ. ರಾಜ್ಯದಲ್ಲಿ ಅಶಾಂತಿಯಾಗಿ ಕಲಹಗಳು ಹೆಚ್ಚಾಗುತ್ತವೆ. ಇದರಿಂದ ರಾಜ್ಯಾದ್ಯಂತ ಅಶಾಂತಿ ಹೆಚ್ಚಾಗಲಿವೆ ಎಂದರು.
ಒಂದೆಡೆ ಪ್ರಕೃತಿ ವಿಕೋಪ, ಮತ್ತೊಂದೆತೆ ಹೆಚ್ಚಾಗಿ ಅಶಾಂತಿ, ಕಲಹಗಳು ಹೆಚ್ಚಾಗಿ ಜನಮನವನ್ನು ಶಾಂತಿ ಕದಡುವ ಕೆಲಸ ಆಗುತ್ತದೆ. ಶುಭನಾಮ ಸಂವತ್ಸರ ಅಶುಭವನ್ನು ಕೊಟ್ಟು ಹೋಗುತ್ತದೆ. ಇದು ಶುಭ ಆಗುವುದಿಲ್ಲ, ಬದಲಾಗಿ ಅಶುಭ ಆಗುತ್ತದೆ. ಮನುಷ್ಯನಿಗೆ ಪ್ರಕೃತಿ, ಮಳೆಯಿಂದ ಸಮಸ್ಯೆಗಳು ಆಗುತ್ತವೆ. ಗುಡ್ಡಗಳು ಕುಸಿತ, ಭೂಕಂಪ ಹೆಚ್ಚಾಗುವ ಲಕ್ಷಣ ಇದೆ. ಪ್ರಾಣಿಗಳು, ವಿಷಜಂತುಗಳಿಂದ ಮನುಷ್ಯನಿಗೆ ನೋವಾಗುತ್ತದೆ ಎಂದರು.