ತಾಳಿಕೋಟಿ : ಮಾಧ್ಯಮಗಳು ಸಮಾಜದಲ್ಲಿ ನಡೆದಿರುವ ಸತ್ಯ ಸಂಗತಿಗಳ ಬಗ್ಗೆ ಬೆಳಕು ಚೆಲ್ಲಬೇಕು ಎಂದು ಇಲ್ಲಿನ ಖಾಸ್ಗತೇಶ್ವರ ಮಠದ ಪೀಠಾಧಿಪತಿ ಸಿದ್ಧಲಿಂಗ ದೇವರು ನುಡಿದರು.
ಪಟ್ಟಣದ ತಾಳಿಕೋಟೆ ಖಾಸ್ಗತೇಶ್ವರ ಮಠದಲ್ಲಿ ಭಾನುವಾರ ಸಂಜೆ ಹೆಬ್ಬಾಳ ಪಬ್ಲಿಸಿಟಿ ಹಾಗೂ ಜನರಕೂಗು ಸುದ್ದಿ ವಾಹಿನಿ ಬಳಗದ 2026 ನೇ ವರ್ಷದ ದಿನದರ್ಶಿಕೆ ಬಿಡುಗಡೆ ಮಾಡಿ ಮಾತನಾಡಿದರು.
ಮಠಗಳು ನಡೆಸುವ ಶೈಕ್ಷಣಿಕ,ಧಾರ್ಮಿಕ ಚಟುವಟಿಕೆಗಳ ಮೇಲೆ ಬೆಳಕು ಚೆಲ್ಲುವ ಕೆಲಸ ಮಾಧ್ಯಮ ಮಾಡಬೇಕಿದೆ.ಮಾಧ್ಯಮ ಕ್ಷೇತ್ರದಲ್ಲಿರುವವರಲ್ಲಿ ಅಸೂಯೆ ಭಾವನೆ ಸಲ್ಲದು.ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿದಾಗ ಅದರ ಪರಿಹಾರ ಸಾಧ್ಯವಾಗುತ್ತದೆ ಎಂದು ಹೇಳಿದರು.
ಉತ್ತರ ಕರ್ನಾಟಕ ಭಾಗದ ಜಾನಪದ ಸಾಹಿತ್ಯ ಅತ್ಯಂತ ಸಿರಿವಂತಿಕೆ ಹೊಂದಿದೆ.ದೈನಂದಿನ ಪ್ರಸಂಗಗಳನ್ನೆ ಹಾಸ್ಯಕ್ಕೆ ಬಳಸಬೇಕು.ಕಲಾವಿದರು ಈ ನಿಟ್ಟಿನಲ್ಲಿ ತಮ್ಮ ಕಾರ್ಯಕ್ರಮಗಳನ್ನು ನಡೆಸುವಂತಾಗಲಿ ಎಂದು ಹೇಳಿದರು.
ಹಿರಿಯ ಪತ್ರಕರ್ತ ಜಿ.ಟಿ.ಘೋರ್ಪಡೆ ಮಾತನಾಡಿ,ಪ್ರಜಾಪ್ರಭುತ್ವದ ನಾಲ್ಕು ಅಂಗಗಳಲ್ಲಿ ನ್ಯಾಯಾಂಗ ತನ್ನ ಅಸ್ತಿತ್ವ ಉಳಿಸಿಕೊಂಡಿದೆ.ಆದರೆ ಪತ್ರಿಕಾರಂಗ,ಶಾಸಕಾಂಗ,ಕಾರ್ಯಾಂಗಗಳಲ್ಲಿ ನ್ಯಾಯ,ನಿಷ್ಠುರತೆ ಕುಸಿಯುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ ಎಂದು ಹೇಳಿದರು.
ಖಾಸ್ಗತೇಶ್ವರ ಮಠದ ಆಡಳಿತಾಧಿಕಾರಿ ವೇ.ಮುರುಗೇಶ ವಿರಕ್ತಮಠ, ಹಿರಿಯ ಪತ್ರಕರ್ತ ಅಂಬಾಜಿ ಘೋರ್ಪಡೆ, ಹೆಬ್ಬಾಳ ಪಬ್ಲಿಸಿಟಿ ಮುಖ್ಯಸ್ಥ , ಪತ್ರಕರ್ತ ಶಂಕರ ಹೆಬ್ಬಾಳ, ಜನರಕೂಗು ಸುದ್ದಿ ವಾಹಿನಿಯ ಮುಖ್ಯಸ್ಥ ಗುಲಾಮಮೊಹ್ಮದ ದಫೇದಾರ ಇದ್ದರು.





