ಮುದ್ದೇಬಿಹಾಳ : ತಾಲ್ಲೂಕಿನ ಕಂದಗನೂರು ಗ್ರಾಮದಲ್ಲಿ ಜಾನುವಾರುಗಳನ್ನು ಕೊಂದಿರುವ ಕಾಡುಪ್ರಾಣಿ ಪತ್ತೆಗಾಗಿ ಪ್ರಾದೇಶಿಕ,ಸಾಮಾಜಿಕ ವಲಯ ಅರಣ್ಯಾಧಿಕಾರಿಗಳ ತಂಡ ಸತತ ಮೂರು ದಿನಗಳಿಂದ ಸ್ಥಳದಲ್ಲೇ ಬೀಡು ಬಿಟ್ಟಿದ್ದು ವಿವಿಧ ಕಾರ್ಯಾಚರಣೆಗಳನ್ನು ನಡೆಸುತ್ತಿದ್ದಾರೆ.
ಪ್ರಾದೇಶಿಕ ಅರಣ್ಯ ಇಲಾಖೆ ಅಧಿಕಾರಿ ಬಸನಗೌಡ ಬಿರಾದಾರ ನೇತೃತ್ವದಲ್ಲಿ, ಕಾಡುಪ್ರಾಣಿ ಸೆರೆಗೆ ಮಂಗಳವಾರ ರಾತ್ರಿ ಕ್ಯಾಮೆರಾ ಅಳವಡಿಸಲಾಗಿದ್ದು ಬೆಳಗ್ಗೆ ನಾಯಿಯೊಂದು ಬೋನಿನೊಳಗಡೆ ಬಿದ್ದಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ.ಬುಧವಾರ ಡ್ರೋಣ್ ಕ್ಯಾಮೆರಾ ಮೂಲಕ ಕಾಡುಪ್ರಾಣಿ ಪತ್ತೆಗೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅರಣ್ಯ ಇಲಾಖೆಯ ಅಧಿಕಾರಿ ಬಸನಗೌಡ ಅವರು, ಸದ್ಯದ ಮಟ್ಟಿಗೆ ಕಾಣಿಸಿಕೊಂಡಿರುವ ಕಾಡುಪ್ರಾಣಿ ಮಾನವನ ಮೇಲೆ ದಾಳಿ ಮಾಡುವ ಸಾಧ್ಯತೆ ಕಡಿಮೆ ಇದ್ದು ಅದರ ಚಲನವಲನದ ಮೇಲೆ ನಿಗಾ ಇರಿಸಿದ್ದೇವೆ ಎಂದು ತಿಳಿಸಿದರು.
ಕಾರ್ಯಾಚರಣೆಯಲ್ಲಿ ಸಾಮಾಜಿಕ ವಲಯ ಅರಣ್ಯ ಇಲಾಖೆಯ ಅಧಿಕಾರಿಗಳಾದ ಎಸ್.ಜೆ.ಸಂಗಾಲಕ, ಉಪ ಅರಣ್ಯಾಧಿಕಾರಿ ರಾಜೇಂದ್ರ ಹುನ್ನೂರ, ಸಿಬ್ಬಂದಿ ಯಲ್ಲಪ್ಪ ಹಿರೇಕುರುಬರ, ವಿಠ್ಠಲ ಬೋರಟಗಿ, ಪ್ರಜ್ವಲ್ ಶೆಟ್ಟರ, ಲಖನ ಕಲಾಲ, ಮುತ್ತು ಮಾದರ, ಶ್ರೀನಿವಾಸ ಐಹೊಳ್ಳಿ, ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ.
ಕಾಣದ ಕಾಡುಪ್ರಾಣಿ-ಮುಂದುವರೆದ ಆತಂಕ : ಕಾಡುಪ್ರಾಣಿ ಚಿರತೆಯೋ , ಕತ್ತೆಕಿರಬುವೋ ಎಂಬುದು ಈವರೆಗೂ ಖಚಿತವಾಗಿಲ್ಲ. ಅರಣ್ಯ ಇಲಾಖೆಯಿಂದ ಸಾಮಾನ್ಯ ರೀತಿಯಲ್ಲಿ ಯಾವುದೇ ಸುರಕ್ಷಿತ ಸಾಧನಗಳನ್ನು ಉಪಯೋಗಿಸದೇ ಕಾರ್ಯಾಚರಣೆ ಮುಂದುವರೆಸಿರುವುದು ಗ್ರಾಮಸ್ಥರಿಗೆ ತೀವ್ರ ಆತಂಕ ತಂದೊಡ್ಡಿದೆ.
ತಾಲ್ಲೂಕಾಡಳಿತ ಈ ಕಾಡುಪ್ರಾಣಿ ದಾಳಿ ಪ್ರಕರಣವನ್ನು ಹಗುರುವಾಗಿ ಪರಿಗಣಿಸಿರುವುದು ಕಂದಗನೂರು, ಚಿರ್ಚನಕಲ್, ಮುದೂರು, ಯರಝರಿ, ಚಲಮಿ, ಹಂಡರಗಲ್, ನಾಗರಾಳ , ಹರಿಂದ್ರಾಳ ಗ್ರಾಮಗಳ ರೈತರು ಆತಂಕದಲ್ಲಿಯೇ ಕಾಲ ಕಳೆಯುವಂತಾಗಿದೆ. ಕೂಡಲೇ ಅರಣ್ಯ ಇಲಾಖೆಯ ಮೇಲಾಧಿಕಾರಿಗಳು ಕಾರ್ಯಾಚರಣೆ ತೀವ್ರಗೊಳಿಸಿ ಕಾಡುಪ್ರಾಣಿ ಪತ್ತೆ ಹಚ್ಚಬೇಕು ಎಂದು ರೈತರು ಒತ್ತಾಯಿಸಿದ್ದಾರೆ.