
ನಾಲತವಾಡ : ನಾನು ಕಳೆದ ಹಲವು ವರ್ಷದಿಂದ ನಮ್ಮ ಫೌಂಡೇಶನ್‌ದಿಂದ ಇಫ್ತಾರ್ ಕೂಟಗಳನ್ನು ಮಾಡಿಕೊಂಡು ಬಂದಿದ್ದೇನೆ. ಈ ಸೇವೆ ಯಾವುದೇ ರಾಜಕೀಯಕ್ಕಾಗಿ ಅಲ್ಲ ಎಂದು ಅಸ್ಕಿ ಫೌಂಡೇಶನ್ ಅಧ್ಯಕ್ಷ, ಕಾಂಗ್ರೆಸ್ ಮುಖಂಡ ಸಿ. ಬಿ. ಅಸ್ಕಿ ಹೇಳಿದರು.

ನಾಲತವಾಡದ ಅಂಜುಮನ್ ಇಸ್ಲಾಂ ಕಮೀಟಿ ಕಚೇರಿಯಲ್ಲಿ ಅಸ್ಕಿ ಫೌಂಡೇಶನ್ ನೇತೃತ್ವದಲ್ಲಿ ಸೋಮವಾರ ಸಂಜೆ ಹಮ್ಮಿಕೊಂಡಿದ್ದ ಇಫ್ತಾರ್ ಕೂಟದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ತಾಳಿಕೋಟಿ, ಮುದ್ದೇಬಿಹಾಳ, ಕೊಣ್ಣೂರು ಹಾಗೂ ನಾಲತವಾಡದಲ್ಲಿ ಮುಸ್ಲಿಂ ಬಾಂಧವರು ಇಫ್ತಾರ್ ಕೂಟ ನಡೆಸುವುದಕ್ಕೆ ಸಹಕಾರ ನೀಡಿದ್ದಾರೆ. ನಮ್ಮ ಫೌಂಡೇಶನ್‌ದಿಂದ ಜನಸೇವೆ ನಿರಂತರವಾಗಿರುತ್ತದೆ. ಸಮಾಜದಲ್ಲಿ ಹಿಂದೂ ಮುಸ್ಲಿಂ ಸೌಹಾರ್ದತೆ ಸಾರುವುದಕ್ಕೆ ಈ ಇಫ್ತಾರ್ ಕೂಟಗಳನ್ನು ನಡೆಸುತ್ತಿದ್ದೇವೆ ಎಂದರು.
ಅಂಜುಮನ್ ಕಮೀಟಿ ಅಧ್ಯಕ್ಷ ಎಲ್. ಎಚ್. ಅವಟಿ ಮಾತನಾಡಿ, ಹಣ ಎಲ್ಲರ ಬಳಿ ಇದೆ. ಆದರೆ ದಾನ ಗುಣ ಎಲ್ಲರಲ್ಲಿ ಇರುವುದಿಲ್ಲ. ಕೋಮು ಸೌಹಾರ್ದತೆ, ಸಮಾಜ ಸೇವೆ, ದಲಿತರಿಗಾಗಿ ಅಸ್ಕಿ ಫೌಂಡೇಶನ್ ಅಧ್ಯಕ್ಷ ಸಿ. ಬಿ. ಅಸ್ಕಿ ಸೇವೆ ಮಾಡುತ್ತಿರುವುದು ಶ್ಲಾಘನೀಯ ಕಾರ್ಯ ಎಂದರು.
ಮುದ್ದೇಬಿಹಾಳ ಪುರಸಭೆ ಅಧ್ಯಕ್ಷ ಮಹೆಬೂಬ ಗೊಳಸಂಗಿ, ಮೌಲಾಸಾಬ ರಕ್ಕಸಗಿ, ಮೌಲಾನಾ ಮಹ್ಮದ್‌ಇಸ್ಮಾಯಿಲ್ ಮುಲ್ಲಾ, ಮೌಲಾನಾ ಮಹ್ಮದಗೌಸ ಸಿಕ್ಕಲಗಾರ, ಊರಿನ ಹಿರಿಯರಾದ ಹುಸೇನಸಾಬ ಮೂಲಿಮನಿ, ಅಲ್ಲಾಭಕ್ಷ ಕುಳಗೇರಿ, ಭಾಷಾಸಾಬ ತೆಗ್ಗಿನಮನಿ, ಮಹೆಬೂಬ ಕುಳಗೇರಿ, ಇಬ್ರಾಹಿಂ ಮೂಲಿಮನಿ, ಹಣಮಂತ ಕುರಿ, ಶರಣಪ್ಪ ಸಜ್ಜನ ಹಾಗೂ ಅಸ್ಕಿ ಫೌಂಡೇಶನ್ ಬಳಗದ ಸದಸ್ಯರು ಇದ್ದರು.