ವಿಜಯಪುರ : ಜಿಲ್ಲೆಯ ಚಡಚಣ ತಾಲೂಕಿನ ಹಲಸಂಗಿ ಗ್ರಾಮದ ಭೂಮಿಕಾ ಜ್ಯುವೆಲ್ಲರಿ ಶಾಪ್ಗೆ ಇಬ್ಬರು ಅಪರಿಚಿತ ಮುಸುಕುಧಾರಿಗಳು ನುಗ್ಗಿ ಅಂಗಡಿ ಮಾಲೀಕನಿಗೆ ಗನ್ ತೋರಿಸಿ ಚಿನ್ನಾಭರಣ ದರೋಡೆ ನಡೆಸಿದ ಘಟನೆ ಹಾಡಹಗಲೇ ನಡೆದಿದ್ದು ಘಟನೆಯ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.
ಹಲಸಂಗಿಯ ಮಹಾರುದ್ರ ಕಂಚಗಾರ ಎಂಬುವರಿಗೆ ಸೇರಿದ ಬಂಗಾರದ ಅಂಗಡಿ ಮೇಲೆ ಮುಸುಕುಧಾರಿ ವ್ಯಕ್ತಿಗಳು ಇಬ್ಬರೂ ಬೈಕ್ ಮೇಲೆ ಬಂದು ಅಂಗಡಿಯಲ್ಲಿದ್ದ ಬಂಗಾರ ಮತ್ತು ಬೆಳ್ಳಿಯ ಆಭರಣಗಳು ದೋಚಿ ಪರಾರಿಯಾಗಿದ್ದಾರೆ.
ಘಟನೆ ವಿವರ : ಅಂಗಡಿ ಪಕ್ಕದಲ್ಲಿ ಬೈಕ್ ನಿಲ್ಲಿಸಿ ಅಂಗಡಿಯ ಮಾಲೀಕನಾದ ಮಹಾರುದ್ರ ತಂದೆ ಸದಾಶಿವ ಕಂಚಗಾರ ಈತನಿಗೆ ಗನ್ ತೋರಿಸಿ ಆತನ ಬಂಗಾರದ ಅಂಗಡಿಯಲ್ಲಿ ಇದ್ದ ಸುಮಾರು 205 ಗ್ರಾಂ ಬಂಗಾರದ ಆಭರಣ ಮತ್ತು 1 ಕೆಜಿ ಬೆಳ್ಳಿಯನ್ನು ಕಳ್ಳತನ ಮಾಡಿದ್ದು, ಇವರು ಕಳ್ಳತನ ಮಾಡುವ ವೇಳೆಯಲ್ಲಿ ಪಕ್ಕದ ಮೊಬೈಲ್ ಅಂಗಡಿಯ ಅನಿಲ್ ಗಲಗಲಿ ಅವರ ಕೃತ್ಯವನ್ನು ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿಕೊಳ್ಳುತ್ತಿದ್ದನ್ನು ಗಮನಿಸಿದ ಕಳ್ಳರು ಆ ವ್ಯಕ್ತಿಯ ಕಡೆಗೆ ಅಪರಿಚಿತ ಕಳ್ಳನು ಗುಂಡು ಹಾರಿಸಿದ್ದಾನೆ.ಅದು ಆ ವ್ಯಕ್ತಿಯ ಪಕ್ಕದಲ್ಲೇ ಇದ್ದ ಆತ್ಮಲಿಂಗಪ್ಪ ಹೂಗಾರ ಎಂಬಾತನ ಕಾಲಿಗೆ ಗುಂಡು ತಗುಲಿದೆ. ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದು ಆತನು ಪ್ರಾಣಾಪಾಯದಿಂದ ಪಾರಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನಾ ಸ್ಥಳಕ್ಕೆ ಎಸ್ಪಿ ಲಕ್ಷ್ಮಣ ನಿಂಬರಗಿ,ಹೆಚ್ಚುವರಿ ಎಸ್ಪಿ ರಾಮನಗೌಡ ಹಟ್ಟಿ, ಡಿವೈಎಸ್ಪಿ ಸದಾಶಿವ ಕಟ್ಟಿಮನಿ, ಸಿಪಿಐ ಪರಶುರಾಮ ಮನಗೂಳಿ, ಝಳಕಿ ಪೋಲಿಸ್ ಠಾಣೆಯ ಪಿಎಸೈ ಮಂಜುನಾಥ ತಿರಕನ್ನವರ, ಚಡಚಣ ಪಿಎಸ್ಐ ಸೋಮೇಶ್ ಗೆಜ್ಜಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.



