ಮುದ್ದೇಬಿಹಾಳ : ಹೆಚ್ಚುತ್ತಿರುವ ಶೀತಗಾಳಿ,ಜ್ವರದಿಂದ ಮಕ್ಕಳು,ವೃದ್ಧರು,ಮಹಿಳೆಯರಲ್ಲಿ ನೆಗಡಿ,ಕೆಮ್ಮು,ಜ್ವರ ಉಲ್ಬಣಗೊಂಡಿದ್ದು ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆ ಪಡೆದುಕೊಳ್ಳಲು ಬರುತ್ತಿರುವ ರೋಗಿಗಳಲ್ಲಿ ಗಣನೀಯ ಸಂಖ್ಯೆಯಲ್ಲಿ ಏರಿಕೆಯಾಗಿದೆ.
ಕಳೆದೊಂದು ವಾರದಿಂದ ಶೀತಗಾಳಿ ಬೀಸುತ್ತಿರುವ ಕಾರಣ ತಾಪಮಾನದಲ್ಲಿ ಬದಲಾವಣೆಯಾಗಿದ್ದು ಹಲವು ರೋಗಗಳಿಗೆ ಈ ವಾತಾವರಣ ಕಾರಣವಾಗುತ್ತಿದೆ.10 ಡಿಗ್ರಿ ಸೆಲ್ಸಿಯಸ್‌ಗಿಂತ ತಾಪಮಾನ ಕುಸಿಯುತ್ತಿದ್ದು ಕೆಮ್ಮು,ನೆಗಡಿ ಜ್ವರದಿಂದ ಜನರು ಬಳಲುವಂತಾಗಿದೆ.
ಮುದ್ದೇಬಿಹಾಳ ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಪರಶುರಾಮ ವಡ್ಡರ ಸುದ್ದಿಗಾರರೊಂದಿಗೆ ಮಾತನಾಡಿ, ಚಳಿಗಾಲದ ಸಮಯದಲ್ಲಿ ಸಾರ್ವಜನಿಕರು ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಮಾಹಿತಿ ನೀಡಿದ್ದಾರೆ.
ಮುದ್ದೇಬಿಹಾಳ ಸರ್ಕಾರಿ ಆಸ್ಪತ್ರೆಗೆ ಸಾಮಾನ್ಯ ದಿನಗಳಲ್ಲಿ ಚಿಕ್ಕಮಕ್ಕಳು 20-30 ರೋಗಿಗಳು ಹೊರರೋಗಿಗಳಾಗಿ ತಪಾಸಣೆ ಮಾಡಿಸಿಕೊಳ್ಳುತ್ತಿದ್ದರೆ ಈಗ ಚಳಿಗಾಲದ ಸಮಯದಲ್ಲಿ 60-70ಕ್ಕೆ ಏರಿಕೆಯಾಗಿದೆ.ದೈನಂದಿನ ತಪಾಸಣೆ ಸಂಖ್ಯೆಯಲ್ಲಿ ಗಣನೀಯವಾಗಿ ಏರಿಕೆಯಾಗಿದ್ದು 600-700 ಜನರು ನಿತ್ಯ ಸರಕಾರಿ ಆಸ್ಪತ್ರೆಗೆ ಬರುತ್ತಿದ್ದಾರೆ ಎಂದು ತಿಳಿಸಿದರು.







