ಮುದ್ದೇಬಿಹಾಳ : ಪಟ್ಟಣದ ಮನಿಯಾರ ಸಮಾಜ ಸೇವಾ ಟ್ರಸ್ಟ್ ನೇತೃತ್ವದಲ್ಲಿ ಭಾನುವಾರ ಇಲ್ಲಿನ ಅನುಗ್ರಹ ಕಣ್ಣಿನ ಆಸ್ಪತ್ರೆಯಲ್ಲಿ ಕಣ್ಣಿನ ಆರೋಗ್ಯ ಉಚಿತ ತಪಾಸಣಾ ಶಿಬಿರ ನಡೆಯಿತು.
ಶಿಬಿರದ ನೇತೃತ್ವ ವಹಿಸಿದ್ದ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಅಯೂಬ ಮನಿಯಾರ ಮಾತನಾಡಿ, ಈಗಾಗಲೇ ತಾಳಿಕೋಟಿಯಲ್ಲಿ ಶಿಬಿರ ನಡೆಸಲಾಗಿದ್ದು ಅಲ್ಲಿ 103 ಜನರು ಶಸ್ತçಚಿಕಿತ್ಸೆಗೆ ಆಯ್ಕೆಯಾಗಿದ್ದಾರೆ. ಅವರನ್ನು ಕಲಬುರ್ಗಿಯಲ್ಲಿರುವ ಅನುಗ್ರಹ ಕಣ್ಣಿನ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಕಳಿಸಿಕೊಡಲಾಗಿದೆ.
ಮುದ್ದೇಬಿಹಾಳದಲ್ಲಿ ನಡೆದ ಶಿಬಿರದಲ್ಲಿ 250 ಜನರ ಕಣ್ಣುಗಳ ಆರೋಗ್ಯ ತಪಾಸಣೆ ನಡೆಸಲಾಗಿದ್ದು 103 ಜನರನ್ನು ಶಸ್ತ್ರಚಿಕಿತ್ಸೆಗೆ ಆಯ್ಕೆ ಮಾಡಲಾಗಿದೆ. ಅವರನ್ನು ಆ.13-15ರಂದು ಶಸ್ತ್ರಚಿಕಿತ್ಸೆಗೆ ವಿಜಯಪುರಕ್ಕೆ ಕಳಿಸಲಾಗುವುದು ಎಂದು ಹೇಳಿದರು.
ಕಣ್ಣಿನ ಪೊರೆ ಬಂದವರಿಗೆ ಮಾತ್ರ ಶಸ್ತ್ರಚಿಕಿತ್ಸೆಗೆ ಆಯ್ಕೆ ಮಾಡಲಾಗುತ್ತದೆ. ಕಣ್ಣಿನ ಗಂಭೀರ ಸಮಸ್ಯೆಗಳಿದ್ದಲ್ಲಿ ರೋಗಿಗಳು ಅವರ ಸಂಬಂಧಿಕರನ್ನು ಕರೆದುಕೊಂಡು ಬಂದು ತಪಾಸಣೆಗೆ ಹೋಗಬೇಕು ಎಂದು ಮನಿಯಾರ ತಿಳಿಸಿದರು.
ಡಾ.ಸತೀಶ ಪಟ್ಟಣಶೆಟ್ಟಿ ಮಾತನಾಡಿ, ಕಳೆದ 12 ವರ್ಷಗಳಿಂದ ಮನಿಯಾರ ಅವರ ನೇತೃತ್ವದಲ್ಲಿ ಬಡವರಿಗೆ ಅನುಕೂಲ ಒದಗಿಸುವ ಕಾರ್ಯ ನಡೆದಿದೆ. ಶ್ರಾವಣ ಮಾಸದಲ್ಲಿ ಇಂತಹ ಕಾರ್ಯಕ್ರಮ ಆಯೋಜಿಸಿರುವುದು ಅವರ ಸೌಹಾರ್ದತೆಗೆ ಸಾಕ್ಷಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ಬಾಗಲಕೋಟೆಯಿಂದ ಆಗಮಿಸಿದ್ದ ಮೇರಿ ಎಂಬುವರು ಮಾತನಾಡಿ, ನನ್ನ ಸ್ನೇಹಿತೆಯಿಂದ ಇಲ್ಲಿ ಕಣ್ಣಿನ ಆರೋಗ್ಯ ಉಚಿತ ತಪಾಸಣೆ ನಡೆಸುತ್ತಾರೆ ಎಂದು ತಿಳಿದು ಬಂದಿದ್ದೇನೆ.ಮನಿಯಾರ ಟ್ರಸ್ಟ್ ನವರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ ಎಂದರು.
ಮುಖಂಡರಾದ ದಾದಾ ಎತ್ತಿನಮನಿ, ಟ್ರಸ್ಟ್ ಸಂಚಾಲಕ ಅಫ್ತಾಬ ಮನಿಯಾರ, ಬಾಬಾ ಯಕೀನ,ರಜಾಕ ಹುನಕುಂಟಿ ಮೊದಲಾದವರು ಇದ್ದರು.