ಮುದ್ದೇಬಿಹಾಳ : ತಮ್ಮೂರಿಗೆ ಹೋಗುವ ಬಸ್ ತಪ್ಪಿಸಿಕೊಂಡಿದ್ದ ಕನ್ನಡ ಅಸ್ಪಷ್ಟವಾಗಿ ಮಾತನಾಡುವ ತಾಯಿ ಹಾಗೂ ಏಳು ವರ್ಷದ ಮಗನನ್ನು ಮಧ್ಯರಾತ್ರಿ ಬಸ್ ನಿಲ್ದಾಣದಲ್ಲಿ ಕಂಡ ಮುದ್ದೇಬಿಹಾಳ 112 ಪೊಲೀಸರು ತಮ್ಮ ಸ್ವಂತ ಹಣ ಖರ್ಚು ಮಾಡಿ ಅವರನ್ನು ಊರಿಗೆ ತಲುಪಿಸಿ ಮಾನವೀಯತೆ ಮೆರೆದ ಘಟನೆ ಈಚೇಗೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ತುಳಜಾಪುರದಿಂದ ಮುದ್ದೇಬಿಹಾಳ ಬಸ್ ನಿಲ್ದಾಣದಕ್ಕೆ ಬಂದಿದ್ದ ತಾಲ್ಲೂಕಿನ ಜಂಗಮುರಾಳದ ಮಹಿಳೆ ಹಾಗೂ ಬಾಲಕ ತಮ್ಮೂರಿಗೆ ತೆರಳುವ ಬಸ್‌ನ್ನು ತಪ್ಪಿಸಿಕೊಂಡಿದ್ದರು.ಬೇರೆ ದಾರಿ ಕಾಣದೇ ಬಸ್ ನಿಲ್ದಾಣದಲ್ಲಿಯೇ ಕೂತಿದ್ದ ಇವರನ್ನು 112 ಸೇವೆಯಲ್ಲಿ ಗಸ್ತಿನಲ್ಲಿದ್ದ ಸಿಬ್ಬಂದಿ ಎಂ.ಬಿ.ಮುಳವಾಡ, ರವಿ ಪವಾರ ಅವರು ಕೂಡಲೇ ಅವರನ್ನು ಮಾತನಾಡಿಸಿ ಅವರಿಗೆ ಖಾಸಗಿಯಾಗಿ ಅಟೋ ಒಂದನ್ನು ಬಾಡಿಗೆ ಮಾಡಿಸಿಕೊಟ್ಟು ಊರಿಗೆ ತಲುಪುವುದಕ್ಕೆ ಸಹಾಯ ಮಾಡಿದ್ದಾರೆ.
ಈ ಘಟನೆಯನ್ನು ರಾತ್ರಿ ಸಮಯದಲ್ಲಿ ಹಸಿದವರಿಗೆ ಆಹಾರದ ಪೊಟ್ಟಣಗಳನ್ನು ಹಂಚುವ ಕೆಲಸ ಮಾಡುತ್ತಿರುವ ಕೆಲವು ಮುಸ್ಲಿಂ ಸಮಾಜದ ಯುವಕರು ಗಮನಿಸಿ ಪೊಲೀಸರ ಮಾನವೀಯ ಕರ‍್ಯವನ್ನು ಸಾಮಾಜಿಕ ಮಾಧ್ಯಮದಲ್ಲಿ ಅಪಲೋಡ್ ಮಾಡಿದ್ದಾರೆ.







