ನವದೆಹಲಿ: ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಆಯೋಜಿಸಿರುವ ಮೈಸೂರು ಚಲೋ ಪಾದಯಾತ್ರೆಗೆ ಜೆಡಿಎಸ್ ಬೆಂಬಲ ನೀಡುತ್ತಿಲ್ಲವೆಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಬಿಜೆಪಿ ಮುಖಂಡರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇಂದು ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಜಕಾರಣ ಬೇರೆ, ಈ ರೀತಿ ಕಾರ್ಯಕ್ರಮದಿಂದ ಏನು ಸಾಧನೆ ಮಾಡಲು ಸಾಧ್ಯ? ಬಿಜೆಪಿಯವರು ನಡೆದುಕೊಂಡ ರೀತಿ ನನ್ನ ಮನಸ್ಸಿಗೆ ನೋವಾಗಿದೆ.
ಪಾದಯಾತ್ರೆ ಮುಖ್ಯಸ್ಥರನ್ನಾಗಿ ಯಾರನ್ನ ಮಾಡಿದ್ದಾರೆ? ಹೂ ಇಸ್ ದಟ್ ಪ್ರೀತಂ ಗೌಡ..? (ಯಾರು ಈ ಪ್ರೀತಂಗೌಡ?) ದೇವೇಗೌಡರ ಕುಟುಂಬವನ್ನ ಸರ್ವನಾಶ ಮಾಡಲು ಹೊರಟಿದ್ದವ. ಅವನನ್ನು ಸಭೆಗೆ ಕರಿತಾರೆ, ಅದಕ್ಕೆ ನನ್ನನ್ನೂ ಕರೀತಾರೆ, ನನಗೂ ಸಹಿಸೋಕೆ ಇತಿ ಮಿತಿ ಇದೆ ಎಂದು ಮಿತ್ರ ಪಕ್ಷ ಬಿಜೆಪಿಯ ಮುಖಂಡರ ವಿರುದ್ಧ ಬಹಿರಂಗವಾಗಿ ಆಕ್ರೋಶ ಹೊರ ಹಾಕಿದ್ದಾರೆ.
ಪೆನ್‌ಡ್ರೈವ್ ಬೀದೀಲಿ ಹಂಚೋಕೆ ಯಾರು ಕಾರಣ ಎಂದು ಬಿಜೆಪಿಗರಿಗೆ ಪ್ರಶ್ನಿಸಿರುವ ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ, ನನ್ನ ಕುಟುಂಬಕ್ಕೆ ವಿಷ ಹಾಕಿದವರನ್ನ ನನ್ನ ಜೊತೇಲಿ ಕೂರಿಸ್ತಾರೆ. ಈಗ ಪಾದಯಾತ್ರೆಗೆ ನಮ್ಮ ಬೆಂಬಲ ಕೇಳ್ತಾರಾ? ಎಂದು ಹರಿಹಾಯ್ದರು.
ಯಾವುದೋ ಒಂದು ಪ್ರಕರಣ ಇಟ್ಕೊಂಡು ಪಾದಯಾತ್ರೆ ಮಾಡೋದು ಎಷ್ಚು ಸರಿ? ಜನರ ಭಾವನೆ, ನೋವಿಗೆ ಸ್ಪಂದಿಸಬೇಕಾಗಿದೆ. ರಾಜಕೀಯವೇ ನಮಗೆ ಪ್ರಾಮುಖ್ಯವಲ್ಲ ಎಂದು ಬಿಜೆಪಿ ಆಯೋಜಿಸಿರುವ ಪಾದಯಾತ್ರೆ ಬಗ್ಗೆ ಅಸಮಾಧಾನ ಹೊರ ಹಾಕಿದ್ದಾರೆ.