ಮುದ್ದೇಬಿಹಾಳ : ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಒಂದು ನಿರ್ದೇಶಕ ಸ್ಥಾನಕ್ಕೆ ಸೋಮವಾರ ನಡೆದ ಚುನಾವಣೆಯಲ್ಲಿ ತುಂಬಗಿ ಎಚ್.ಪಿ.ಎಸ್ ಶಾಲೆಯ ಶಿಕ್ಷಕ ಶಂಕರಗೌಡ ಬಿರಾದಾರ ಆಯ್ಕೆಯಾಗಿದ್ದಾರೆ.
ಪಟ್ಟಣದ ರಾಜ್ಯ ಸರ್ಕಾರಿ ನೌಕರರ ಭವನದಲ್ಲಿ ಮತದಾನ ಪ್ರಕ್ರಿಯೆ ಶಾಂತಿಯುತವಾಗಿ ನಡೆಯಿತು.431 ಒಟ್ಟು ಮತದಾರರಲ್ಲಿ 395 ಮತದಾರರು ತಮ್ಮ ಹಕ್ಕು ಚಲಾಯಿಸಿದರು.ಅದರಲ್ಲಿ ಶಂಕರಗೌಡ ಬಿರಾದಾರಗೆ 217 , ಬಂದಗಿಪಟೇಲ್ ಗಣಿಯಾರ ಅವರಿಗೆ 173 ಮತಗಳು ದೊರೆತವು. ಐದು ಮತಗಳು ಅಸಿಂಧುಗೊಂಡವು. ಶಂಕರಗೌಡ ಬಿರಾದಾರ ಅವರು 44 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ ಎಂದು ಚುನಾವಣಾಧಿಕಾರಿ ಎಸ್.ಆರ್.ಕಟ್ಟಿಮನಿ, ಎಆರ್‌ಒ ಬಿ.ಎಚ್.ಹೂಗಾರ ಮಾಹಿತಿ ನೀಡಿದರು.
ಸಹಾಯಕರಾಗಿ ಮಹಾಂತೇಶ ಮಾಗಿ, ಆರ್.ಎಸ್.ಹೊಸೂರ,ರಿಯಾಜ ನಾಯ್ಕೋಡಿ, ಮುತ್ತಣ್ಣ ವಾಲೀಕಾರ ಕಾರ್ಯನಿರ್ವಹಿಸಿದರು.
ವಿಜೇತ ಅಭ್ಯರ್ಥಿಗೆ ಜಿ.ಒ.ಸಿ.ಸಿ ಬ್ಯಾಂಕ್ ನಿರ್ದೇಶಕ ಅರವಿಂದ ಹೂಗಾರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಎಚ್.ಮುದ್ನೂರ,ಗ್ರಾಮ ಆಡಳಿತಾಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷ ಗಂಗಾಧರ ಜೂಲಗುಡ್ಡ, ತಾಲ್ಲೂಕು ಅಧ್ಯಕ್ಷ ಮನೋಜ ರಾಠೋಡ, ವೆಂಕಟೇಶ ಅಂಬಿಗೇರ, ಎನ್.ಎಸ್.ತುರುಡಗಿ,ಬಿ.ಎಸ್.ಹೊಳಿ,ಎಂ.ಎನ್.ಪಾಟೀಲ್ ಅಭಿನಂದಿಸಿದರು.
ವಿಜಯೋತ್ಸವ: ಅವಿರೋಧ ಆಯ್ಕೆಗೆ ಸಾಕಷ್ಟು ಪ್ರಯತ್ನ ಪಟ್ಟರೂ ಒಂದು ಸ್ಥಾನಕ್ಕೆ ಚುನಾವಣೆ ನಡೆಸುವುದು ಅನಿವಾರ್ಯವಾಯಿತು.ಶಾಂತಿಯುತವಾಗಿ ಚುನಾವಣೆ ನಡೆಸಲಾಗಿದ್ದು ನಮ್ಮ ಪೆನಲ್ ಅಭ್ಯರ್ಥಿ ಶಂಕರಗೌಡ ಬಿರಾದಾರ ಆಯ್ಕೆಯಾಗಿರುವುದು ಖುಷಿ ತಂದಿದೆ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಳಿಕೋಟಿ ಘಟಕದ ಅಧ್ಯಕ್ಷ ಬಿ.ಟಿ.ವಜ್ಜಲ ತಿಳಿಸಿದರು.ಈ ಸಂದರ್ಭದಲ್ಲಿ ಬೆಂಬಲಿಗರಾದ ಸುರೇಶ ಬೀರಗೊಂಡ, ಸುರೇಶ ವಾಲೀಕಾರ, ರಮೇಶ ಹಿಪ್ಪರಗಿ,ಬಿ.ಎಸ್.ಶೇಖಣ್ಣವರ, ಶ್ರೀಕಾಂತ ಪವಾರ ಇದ್ದರು.ಎಎಸ್‌ಐ ಬಿ.ಡಿ.ಪವಾರ ಭದ್ರತೆ ಒದಗಿಸಿದ್ದರು.