ಸಂಭ್ರಮಾಚರಣೆ ವೇಳೆ ಪೊಲೀಸರಿಂದ ಲಾಠಿ ಪ್ರಹಾರ
ಮುದ್ದೇಬಿಹಾಳ : ಬೆಂಗಳೂರಿನ ರಾಯಲ್ ಚಾಲೆಂರ‍್ಸ್ ತಂಡ 18 ವರ್ಷದ ಬಳಿಕ ಕಪ್ ಗೆಲುವು ಸಾಧಿಸುತ್ತಿದ್ದಂತೆ ಅಭಿಮಾನಿಗಳ ಉತ್ಸಾಹ ಮೇರೆ ಮೀರಿದ್ದು ಸಂಭ್ರಮಾಚಾರಣೆ ವೇಳೆ ಪೊಲೀಸರು ಬೀಸಿದ ಲಾಠಿ ಏಟಿಗೆ ಒಬ್ಬ ಯುವಕ ಗಾಯಗೊಂಡಿದ್ದು ಸಂಭ್ರಮಾಚರಣೆಯ ವೇಳೆ ಸಂಭವನೀಯ ಅವಘಡ ತಪ್ಪಿಸಲು ಹೋದ ಪೊಲೀಸ್ ಪೇದೆಗೂ ಒಳಪೆಟ್ಟಾಗಿರುವ ಘಟನೆ ಮಂಗಳವಾರ ಇಲ್ಲಿನ ಬಸವೇಶ್ವರ ವೃತ್ತದಲ್ಲಿ ನಡೆದಿದೆ.
ಪಟ್ಟಣದಲ್ಲಿ ಮೂರು ವರ್ಷಕ್ಕೊಮ್ಮೆ ಗ್ರಾಮದೇವತೆ ಜಾತ್ರೆ ಜರುಗುತ್ತಿದ್ದು ಮಂಗಳವಾರ ಜಾತ್ರೆಯ ಕಡೆಯ ದಿನವಾಗಿತ್ತು. ರಾತ್ರಿ ಹೆಚ್ಚಿನ ಜನಸಂದಣಿ ಬಸವೇಶ್ವರ ವೃತ್ತ, ವಿಬಿಸಿ ಹೈಸ್ಕೂಲ್ ಮೈದಾನ, ಗ್ರಾಮದೇವತೆ ವೇದಿಕೆ ಬಳಿ ಜಮಾಯಿಸಿದ್ದರು. ಆರ್.ಸಿ.ಬಿ ಪಂದ್ಯದ ಪ್ರತಿ ಕ್ಷಣವನ್ನೂ ಅಭಿಮಾನಿಗಳು ತಮ್ಮ ಮೊಬೈಲ್‌ದಲ್ಲಿ ವೀಕ್ಷಿಸುತ್ತಿದ್ದರು.
ಕಡೆಯ ಓವರ್‌ನಲ್ಲಿ ಆರ್.ಸಿ.ಬಿ ಪಂದ್ಯ ಗೆಲುವು ಸಾಧಿಸಿ ಎನ್ನುವುದು ತಿಳಿಯುತ್ತಿದ್ದಂತೆ ಜಾತ್ರೆಗೆ ಆಗಮಿಸಿದ್ದ ಜನರನ್ನು ಲೆಕ್ಕಿಸದೇ ಅಭಿಮಾನಿಗಳ ಹುಚ್ಚಾಟ ಮೇರೆ ಮೀರಿತು. ಸಾವಿರಾರು ಸಂಖ್ಯೆಯಲ್ಲಿ ಬಸವೇಶ್ವರ ವೃತ್ತದಲ್ಲಿ ಜಮಾಯಿಸಿದ ಅಭಿಮಾನಿಗಳು ಆರ್.ಸಿ.ಬಿ., ಆರ್.ಸಿ.ಬಿ., ಎಂದು ಘೋಷಣೆ ಹಾಕುತ್ತಾ ಕುಣಿದು ಕುಪ್ಪಳಿಸ ತೊಡಗಿದ್ದರು.
ಇದರಿಂದಾಗಿ ಜಾತ್ರೆಗೆ ಆಗಮಿಸಿದ್ದ ಗರ್ಭಿಣಿಯರು, ಮಹಿಳೆಯರು ಮಕ್ಕಳಿಗೆ ತೊಂದರೆ ಉಂಟಾಯಿತು. ಕೂಡಲೇ ಅಭಿಮಾನಿಗಳಿಗೆ ಎಚ್ಚರಿಕೆ ನೀಡಿದ ಪೊಲೀಸರು ಗುಂಪು ಸೇರಿ ಸಮಸ್ಯೆ ಸೃಷ್ಟಿಸದಂತೆ ಎಚ್ಚರಿಕೆ ನೀಡಿದರೂ ಗಮನ ಹರಿಸದೇ ಮತ್ತಷ್ಟು ಯುವಕರು ವೃತ್ತಕ್ಕೆ ಬಂದು ಡಿಜೆ ಹಾಡಿಗೆ ಕುಣಿದು ಕುಪ್ಪಳಿಸಲು ಶುರು ಮಾಡಿದರು. ಒಂದು ಗುಂಪು ಆರ್.ಸಿ.ಬಿ ಎನ್ನುತ್ತಾ ಮೆರವಣಿಗೆ ಹೊರಟಿದ್ದನ್ನು ಕಂಡ ಪಿಎಸ್‌ಐ ಸಂಜಯ ತಿಪರೆಡ್ಡಿ ಕೂಡಲೇ ಇದನ್ನು ನಿಲ್ಲಿಸುವಂತೆ ಸೂಚಿಸಿದರು.
ಆದರೆ ಕೆಲವರು ಅವರ ಮಾತಿಗೆ ಬೆಲೆ ನೀಡದೇ ಇದ್ದರಿಂದ ತಮ್ಮ ಸಿಬ್ಬಂದಿಗೆ ಸೂಚಿಸಿ ಲಾಠಿ ಪ್ರಹಾರ ನಡೆಸಿ ಯುವಕರನ್ನು ಚದುರಿಸಿದರು. ಕೈಗೆ ಸಿಕ್ಕವರ ಮೇಲೆ ಲಾಠಿ ಬೀಸಿ ಯುವಕರನ್ನು ಉತ್ಸಾಹಕ್ಕೆ ಬ್ರೇಕ್ ಹಾಕಿದರು. ಘಟನೆಯಲ್ಲಿ ಓರ್ವನಿಗೆ ಬಾಸುಂಡೆ ಬಂದಿದ್ದು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡರು.
ಪೇದೆ ಸಂಗಮೇಶ ಚಲವಾದಿ ಅವರಿಗೆ ಗದ್ದಲದಲ್ಲಿ ಒಳಪೆಟ್ಟಾಗಿದ್ದು ಅವರು ಪ್ರಾಥಮಿಕ ಚಿಕಿತ್ಸೆ ಪಡೆದುಕೊಂಡರು. ಘಟನೆಗೆ ಸಂಬಂಧಿಸಿದಂತೆ ಪಿಎಸ್‌ಐ ಸಂಜಯ ತಿಪರೆಡ್ಡಿ ಮಾತನಾಡಿ, ಒಮ್ಮೇಲೆ ಸಾವಿರಾರು ಸಂಖ್ಯೆಯಲ್ಲಿ ಬಂದ ಯುವಕರು ಟ್ರಾಫಿಕ್ ಸಂಚಾರಕ್ಕೆ ಅಡ್ಡಿಪಡಿಸಲು ಮುಂದಾದರು. ಟ್ರಕ್ ಮೇಲೆ ಜೋರಾದ ಸೌಂಡ್ ಹಾಕಿಕೊಂಡು ಗದ್ದಲ ಸೃಷ್ಟಿಸಲು ಮುಂದಾದರು. ತಕ್ಷಣ ನಿಯಂತ್ರಣಕ್ಕೆ ತರಲು ಲಾಠಿ ಬೀಸಿದ್ದೇವೆ. ಘಟನೆಯಲ್ಲಿ ನಮ್ಮವರಿಗೂ ಗಾಯವಾಗಿದೆ. ಘಟನೆಯ ವಿಡಿಯೋ ಪರಿಶೀಲನೆ ನಡೆಸುತ್ತಿದ್ದು ಪ್ರಕರಣ ದಾಖಲಿಸಿಕೊಳ್ಳುವ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.
ಕುಣಿದು ಕುಪ್ಪಳಿಸಿದ ಬಿಗ್‌ಬಾಸ್ ವಿಜೇತ ಹಣಮಂತ ಲಮಾಣಿ: ಆರ್.ಸಿ.ಬಿ ಪಂದ್ಯ ಗೆಲ್ಲುತ್ತಿದ್ದಂತೆ ಮುದ್ದೇಬಿಹಾಳದ ಗ್ರಾಮ ದೇವತೆ ಜಾತ್ರೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನೀಡಲು ಆಗಮಿಸಿದ್ದ ಬಿಗ್ ಬಾಸ್ ವಿಜೇತ ಹಣಮಂತ ಲಮಾಣಿ ವೇದಿಕೆಯಲ್ಲಿಯೇ ಕುಣಿದಾಡಿ ಸಂಭ್ರಮಿಸಿದರು. ಅವರನ್ನು ಹೆಗಲ ಮೇಲೆ ಹೊತ್ತುಕೊಂಡ ಯುವಕ ಅನಿಲ್ ನಾಯಕ, ವಿಷ್ಣು ಲಮಾಣಿ ವಿಜಯೋತ್ಸವವನ್ನು ಆಚರಿಸಿದರು. ಅಲ್ಲದೇ ವೇದಿಕೆಯಲ್ಲಿ ಆಗಮಿಸಿದ್ದ ಕಲಾವಿದರಾದ ದಿಯಾ ಹೆಗಡೆ, ಸುಹಾನಾ ಸಯ್ಯದ, ರೇವಣಸಿದ್ದ ಪುಲಾರಿ, ಶ್ರೀರಾಮ ಕಾಸರ, ಸಮನ್ವಿ ರೈ, ಕರಿಬಸವ ತಡಕಲ್ಲ, ಭೂಮಿಕಾ, ಗೋಪಾಲ ಹೂಗಾರ, ಶ್ರೀಶೈಲ ಹೂಗಾರ ಸಂಭ್ರಮಿಸಿದರು. ಕಾರ್ಯಕ್ರಮದಲ್ಲಿ ಸೇರಿದ್ದ 20ಸಾವಿರಕ್ಕೂ ಅಧಿಕ ಸಂಖ್ಯೆಯ ಜನ ಆರ್.ಸಿ.ಬಿ ಗೆಲುವು ಸಂಭ್ರಮಿಸಿದರು.