ಮುದ್ದೇಬಿಹಾಳ : ಕುಲಕಸುಬು ಮಾಡುವವರನ್ನು ಸಮಾನತೆಯಿಂದ ಸಮಾಜ ಈವರೆಗೂ ಕಾಣುತ್ತಿಲ್ಲ. ಸಣ್ಣ ಸಮಾಜದವರನ್ನು ತುಳಿಯುತ್ತಾರೆ. ಅವರನ್ನು ಮುಖ್ಯವಾಹಿನಿಗೆ ತರಬೇಕು. ಸಣ್ಣ ಸಣ್ಣ ಸಮಾಜಗಳು ಒಕ್ಕೂಟ ರಚಿಸಿಕೊಂಡು ಒಗ್ಗಟ್ಟಾಗಬೇಕು ಎಂದು ಅಬಕಾರಿ ಸಚಿವ ಆರ್. ಬಿ. ತಿಮ್ಮಾಪೂರ ಅವರು ಹೇಳಿದರು.
ತಾಲ್ಲೂಕಿನ ತಾಲ್ಲೂಕಿನ ತಂಗಡಗಿ ಗ್ರಾಮದಲ್ಲಿ ಭಾನುವಾರ ಹಡಪದ ಅಪ್ಪಣ್ಣ ಗುರುಪೀಠದಲ್ಲಿ ಸಮಾಜದ ಪ್ರಥಮ ಗುರು ಲಿಂ.ಬಸವಪ್ರಿಯ ಹಡಪದ ಅಪ್ಪಣ್ಣ ಸ್ವಾಮೀಜಿಯವರ 17ನೇ ಪುಣ್ಯಸ್ಮರಣೆ ಹಾಗೂ ಎಸ್.ಎಸ್.ಎಲ್.ಸಿ, ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರತಿ ಮನುಷ್ಯನಿಗೂ ಸ್ವಾಭಿಮಾನ ಮುಖ್ಯವಾಗಿದ್ದು ಒಬ್ಬರ ಮನಸ್ಸಿಗೆ ನೋವಾಗುವಂತೆ ಮಾತನಾಡಬಾರದು. ಹಡಪದ ಜನಾಂಗ ಆರ್ಥಿಕವಾಗಿ ಬೆಳವಣಿಗೆ ಹೊಂದಲು ಸಹಕಾರಿ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಬೇಕು. ಲಿಂ. ಬಸವಪ್ರಿಯ ಅಪ್ಪಣ್ಣನವರ ಗದ್ದುಗೆಯನ್ನು ದೇವಸ್ಥಾನವನ್ನಾಗಿ ಅಭಿವೃದ್ಧಿಪಡಿಸಲು ವಯಕ್ತಿಕವಾಗಿ ಒಂದು ಲಕ್ಷ ರೂ. ಅನುದಾನ ನೀಡುವುದಾಗಿ ವಾಗ್ದಾನ ಮಾಡಿದರು.
ಶಾಸಕ ಸಿ.ಎಸ್.ನಾಡಗೌಡ ಮಾತನಾಡಿ, ಸಿದ್ಧರಾಮಯ್ಯನವರ ಅವಧಿಯಲ್ಲಿ ಹಡಪದ ಅಪ್ಪಣ್ಣ ಗುರುಪೀಠದ ಅಭಿವೃದ್ಧಿಗೆ ಒಂದು ಕೋಟಿ ರೂ.ಅನುದಾನ ಒದಗಿಸಲಾಗಿದೆ. ಹಡಪದ ಸಮಾಜದ ಏಳ್ಗೆಗೆ ಸರ್ಕಾರ ಬದ್ಧವಾಗಿದೆ ಎಂದರು.
ಕಾಂಗ್ರೆಸ್ ಮುಖಂಡ ಸಿ.ಬಿ.ಅಸ್ಕಿ ಮಾತನಾಡಿ, ಹಡಪದ ಅಪ್ಪಣ್ಣನವರನ್ನು ಬಸವಣ್ಣನವರು ತಮ್ಮ ಕಾರ್ಯದರ್ಶಿಗಳಾಗಿ ಮಾಡಿಕೊಂಡು ಸಮ ಸಮಾಜದ ನಿರ್ಮಾಣಕ್ಕೆ ಶ್ರಮಿಸಿದ್ದಾರೆ. ತಂಗಡಗಿಯನ್ನು ಬಸವನ ಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಸೇರ್ಪಡೆ ಮಾಡಿದ್ದು ಕಾಂಗ್ರೆಸ್ ಸರ್ಕಾರ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಇಳಕಲ್ ಚಿತ್ತರಗಿ ವಿಜಯ ಮಹಾಂತೇಶ ಮಠದ ಗುರುಮಹಾಂತ ಸ್ವಾಮೀಜಿ, ಚಿತ್ರದುರ್ಗದ ಮಾಚಿದೇವ ಸಂಸ್ಥಾನ ಮಠದ ಬಸವ ಮಾಚಿದೇವ ಸ್ವಾಮೀಜಿ, ಹಡಪದ ಅಪ್ಪಣ್ಣ ಗುರುಪೀಠದ ಅನ್ನದಾನ ಭಾರತಿ ಅಪ್ಪಣ್ಣ ಸ್ವಾಮೀಜಿ, ಟ್ರಸ್ಟ್ನ ಗೌರವಾಧ್ಯಕ್ಷ ಎಂ.ಎಸ್.ನಾವಿ, ನೌಕರರ ಸಂಘದ ಪ್ರಕಾಶ ಹಡಪದ, ಜಿಲ್ಲಾಧ್ಯಕ್ಷ ವಿ.ಜಿ.ಕತ್ನಳ್ಳಿ, ನಿಂಗಪ್ಪ ನಾವಿ, ಮಹಾಂತೇಶ ಮೂಲಿಮನಿ, ಸಿ.ಎಫ್.ನಾವಿ, ನಾಗೇಶ ನಾಗೂರ, ಓಂಕಾರ ನಾವಿ, ಸೋಮನಗೌಡ ಪಾಟೀಲ ನಡಹಳ್ಳಿ ಮೊದಲಾದವರು ಇದ್ದರು.
ಎಸ್.ಎಸ್.ಎಲ್.ಸಿ.,ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.