ವಿಜಯನಗರ (ಹೊಸಪೇಟೆ), ಜುಲೈ4 : ರಾಜ್ಯದಲ್ಲಿರುವ ವಿವಿಧ 91 ವರ್ಗಗಳ 35 ಲಕ್ಷ ಕಾರ್ಮಿಕರನ್ನು ಗುರುತಿಸಿ, ಉಚಿತವಾಗಿ ನೋಂದಾಯಿಸಿ ವಿವಿಧ ಸೌಲಭ್ಯಗಳನ್ನೊಳಗೊಂಡ ಸ್ಮಾರ್ಟ್ ಕಾರ್ಡ್ ನೀಡುವ ಮೂಲಕ ಜನರ ದುಡ್ಡನ್ನು ಜನರಿಗೆ ನೀಡುವ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿದೆ ಎಂದು ಕಾರ್ಮಿಕ ಹಾಗೂ ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯ ಅಧ್ಯಕ್ಷರಾದ ಸಂತೋಷ್ ಲಾಡ್ ಹೇಳಿದರು.
ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ, ಸಾರಿಗೆ ಇಲಾಖೆ, ಜಿಲ್ಲಾಡಳಿತ ಮತ್ತು ಜಿಪಂ ಸಹಯೋಗದಲ್ಲಿ ವಿಜಯನಗರ ಜಿಲ್ಲೆಯ ವಿವಿಧ ವರ್ಗಗಳ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ ಮತ್ತು ವಿವಿಧ ಯೋಜನೆಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿನ ಆರಂಭಿಕವಾಗಿ 26 ವರ್ಗಗಳ ಅಸಂಘಟಿತ ಕಾರ್ಮಿಕರನ್ನು ನೋಂದಾಯಿಸಲಾಗಿತ್ತು. ಹೊಸದಾಗಿ ಹಿಂದುಳಿದ ವರ್ಗಗಳಿಗೆ ಸೇರಿದ ಪಾರಂಪಾರಿಕ ವೃತ್ತಿಯಲ್ಲಿ ತೊಡಗಿರುವ 38 ವರ್ಗಗಳು ಹಾಗೂ ಹಿಂದುಗಳಿದ ವರ್ಗಗಳ ಅಲೆಮಾರಿ ಹಾಗೂ ಅರೆ ಅಲೆಮಾರಿ ಪಂಗಡದ ಕುಲಕಸುಬಿನಲ್ಲಿ ತೊಡಗಿರುವ 27 ವರ್ಗಗಳ ಕಾರ್ಮಿಕರು ಸೇರಿದಂತೆ ಒಟ್ಟು 91 ವರ್ಗಗಳ ಕಾರ್ಮಿಕರನ್ನು ಗುರುತಿಸಿ ಸೌಲಭ್ಯವನ್ನು ನೀಡಲಾಗುತ್ತಿದೆ. ಈ ಯೋಜನೆಯಡಿಯಲ್ಲಿ ಅಪಘಾತ ಪರಿಹಾರ ಸೌಲಭ್ಯ ಅಪಘಾತದಿಂದ ಮರಣ ಹೊಂದಿದಲ್ಲಿ, ಅಥವಾ ಸಂಪೂರ್ಣ ದುರ್ಬಲತೆ ಹೊಂದಿದಲ್ಲಿ ಅವರ ನಾಮನಿದೇರ್ಶಿತರಿಗೆ 1 ಲಕ್ಷ ರೂ ಪರಿಹಾರ, ಆಸ್ಪತ್ರೆ ಚಿಕಿತ್ಸೆ ವೆಚ್ಚಕ್ಕೆ 50 ಸಾವಿರ ರೂ, ಸಹಜ ಮರಣ ಪರಿಹಾರ ಮತ್ತು ಅಂತ್ಯಕ್ರಿಯೆ ವೆಚ್ಚ 10 ಸಾವಿರ ರೂಗಳ ಧನ ಸಹಾಯ ನೀಡಲಾಗುತ್ತದೆ. ಅಷ್ಟೇ ಅಲ್ಲದೇ 2024 ರಲ್ಲಿ ಕರ್ನಾಟಕ ರಾಜ್ಯ ಮೋಟಾರು ಸಾರಿಗೆ ಹಾಗೂ ಇತರೆ ಸಂಬಂಧಿತ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ಧಿ ಮಂಡಳಿ ರೂಪಿಸಿ ಅಧಿನಿಯಮವನ್ನು ಜಾರಿಗೊಳಿಸಿ 20 ವರ್ಗಗಳನ್ನು ಗುರುತಿಸಿ ಸೌಲಭ್ಯಗಳನ್ನು ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಯೋಜನೆಯಡಿ ಅಪಘಾತದಿಂದ ಫಲಾನುಭವಿ ನಿಧನರಾದರೆ 5 ಲಕ್ಷ ರೂ ಪರಿಹಾರ, ಶಾಶ್ವತ ದುರ್ಬಲತೆ ಹೊಂದಿದರೆ 2 ಲಕ್ಷ ರೂ ವರೆಗೆ ಪರಿಹಾರ , ತಾತ್ಕಾಲಿಕ ದುರ್ಬಲತೆ ಹೊಂದಿದರೇ ಆಸ್ಪತ್ರೆ ಚಿಕಿತ್ಸೆ ವೆಚ್ಚಕ್ಕಾಗಿ 1 ಲಕ್ಷ ರೂ ವರೆಗೆ ಪರಿಹಾರ, ಮೃತರ ಕುಟುಂಬದ ಇಬ್ಬರು ಮಕ್ಕಳಿಗೆ 1 ರಿಂದ ಪದವಿವರೆಗೆ ತಲಾ 10 ಸಾವಿರ ರೂಗಳು ನೀಡಲಾಗುತ್ತಿದೆ ಎಂದರು.
ರಾಜ್ಯ ಸರ್ಕಾರದ ಪೆಟ್ರೋಲ್ ಮತ್ತು ಡಿಸೇಲ್‌ನಿಂದ ರಾಜ್ಯಕ್ಕೆ ಬರುವ ತೆರಿಗೆ ಸಂಗ್ರಹದಲ್ಲಿ ಕನಿಷ್ಠ ಶೇ.1 ರಷ್ಟು ಹಣವನ್ನು ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಗೆ ನೀಡಬೇಕೆಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ. ಒಪ್ಪಿಗೆ ಸಿಕ್ಕರೆ 2200 ಕೋಟಿ ರೂ ಸಂಗ್ರಹವಾಗಲಿದೆ. ಅದನ್ನು ನೇರವಾಗಿ ಸ್ಮಾರ್ಟ್ ಕಾರ್ಡ್ ಫಲಾನುಭವಿಗಳಿಗೆ ಸೌಲಭ್ಯಗಳನ್ನು ನೀಡಲು ಬಳಸಲಾಗುವುದು ಎಂದು ಭರವಸೆ ನೀಡಿದರು.
ರಾಜ್ಯ ಸರ್ಕಾರ ಅಡಳಿತಕ್ಕೆ ಬಂದ ಮೇಲೆ ಪಂಚ ಗ್ಯಾರಂಟಿಗಳ ಅನುಷ್ಠಾನದ ವಿರುದ್ದ ವಿಪಕ್ಷಗಳು ಸೇರಿದಂತೆ ಹಲವರು ಟೀಕೆ ಮಾಡಿದ್ದರು. ಕೇವಲ ಎರಡು ತಿಂಗಳಲ್ಲೇ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಿ ರಾಜ್ಯದ ಜನತೆಗೆ ವರ್ಷಕ್ಕೆ ನೇರವಾಗಿ 60 ಸಾವಿರ ಕೋಟಿ ರೂ, ಐದು ವರ್ಷಕ್ಕೆ 3 ಲಕ್ಷ ಕೋಟಿ ನೀಡುವ ದೇಶದ ಏಕೈಕ ಸಿ ಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಎಂಬುದನ್ನು ಹೆಮ್ಮೆಯಿಂದ ತೋರಿಸಿದ್ದೇವೆ. ಕೇಂದ್ರ ಸರ್ಕಾರ ಜಿಡಿಪಿಯ ಬಗ್ಗೆ ಜನರಲ್ಲಿ ತಪ್ಪು ಕಲ್ಪನೆಯನ್ನು ಮೂಡಿಸುತ್ತಿದೆ. ಸುಮಾರು 23 ಪಿಎಸ್‌ಯು ಸಂಸ್ಥೆಗಳು ದಿವಾಳಿ ಆಗಿವೆ. ಬಿಎಸ್‌ಎನ್‌ಎಲ್ ಸಂಸ್ಥೆ ನೆಲಕಚ್ಚಿದೆ. ಜಿಯೋ ಉನ್ನತ ಸ್ಥಾನಕ್ಕೇರಿದೆ ಎಂದರು.
ಬಳ್ಳಾರಿ ಮತ್ತು ವಿಜಯನಗರ ಸಂಸದ ಈ.ತುಕಾರಾಂ, ಶಾಸಕರಾದ ಹೆಚ್.ಆರ್.ಗವಿಯಪ್ಪ, ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ಮಾತನಾಡಿದರು.
ಈ ವೇಳೆ ಕೂಡ್ಲಿಗಿ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ನಗರಸಭೆ ಅಧ್ಯಕ್ಷ ರೂಪೇಶ್ ಕುಮಾರ್, ಉಪಾಧ್ಯಕ್ಷ ರಮೇಶ್, ಹುಡಾ ಅಧ್ಯಕ್ಷ ಹೆಚ್.ಎನ್.ಎಫ್.ಇಮಾಮ್ ನಿಯಾಜಿ, ಲಿಡ್ಕರ್ ನಿಗಮದ ಅಧ್ಯಕ್ಷ ಮುಂಡರಗಿ ನಾಗರಾಜ್, ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಕುರಿ ಶಿವಮೂರ್ತಿ, ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್, ಜಿ ಪಂ ಸಿಇಒ ನೊಂಗ್ಜಾಯ್ ಮೊಹಮ್ಮದ್ ಅಕ್ರಮ್ ಅಲಿ ಷಾ, ಎಸ್ಪಿ ಶ್ರೀಹರಿಬಾಬು ಬಿ.ಎಲ್, ಕಾರ್ಮಿಕ ಆಯುಕ್ತರಾದ ಡಾ.ಎಚ್.ಎನ್.ಗೋಪಾಲಕೃಷ್ಣ, ಜಂಟಿ ಕಾರ್ಮಿಕ ಆಯುಕ್ತರು ಹಾಗೂ ಜಂಟಿ ಕಾರ್ಯದರ್ಶಿ ಡಾ.ಎಸ್.ಬಿ.ರವಿಕುಮಾರ್, ಕಲಬುರಗಿ ಉಪಕಾರ್ಮಿಕ ಆಯುಕ್ತ ಡಾ.ವೆಂಕಟೇಶ್ ಶಿಂದಿಹಟ್ಟಿ, ಬಳ್ಳಾರಿ ವಿಭಾಗದ ಸಹಾಯಕ ಕಾರ್ಮಿಕ ಆಯುಕ್ತ ಡಾ.ಅವಿನಾಶ ನಾಯ್ಕ, ಜಿಲ್ಲಾ ಕಾರ್ಮಿಕ ಅಧಿಕಾರಿ ಸೂರ್ಯಪ್ಪ ಈ.ದೊಂಬರಮತ್ತೂರು ಸೇರಿದಂತೆ ವಿವಿಧ ಮುಖಂಡರು, ನಗರಸಭೆ ಸದಸ್ಯರು ಉಪಸ್ಥಿತರಿದ್ದರು.