ಮುದ್ದೇಬಿಹಾಳ : ಪಟ್ಟಣದಲ್ಲಿ ಬೀದಿ ಬದಿ ವ್ಯಾಪಾರ ಮಾಡುವ ಬಡವರಿಂದ ಬೀದಿ ಬದಿ ಬಾಡಿಗೆ ಶುಲ್ಕ ವಸೂಲಿ ಮಾಡುವ ಗುತ್ತಿಗೆದಾರ ದುಪ್ಪಟ್ಟು ಹಣವನ್ನು ವಸೂಲಿ ಮಾಡುತ್ತಿದ್ದು ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಬ್ಲಾಕ್ ಕಾಂಗ್ರೆಸ್ ಸಮೀತಿಯ ಬೀದಿ ಬದಿ ವ್ಯಾಪಾರಿಗಳ ಘಟಕದಿಂದ ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಪುರಸಭೆ ಎದುರಿಗೆ ಮಂಗಳವಾರ ಮುಖ್ಯಾಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಬ್ಲಾಕ್ ಕಾಂಗ್ರೆಸ್ ಬೀದಿ ಬದಿ ವ್ಯಾಪಾರಿಗಳ ಘಟಕದ ಅಧ್ಯಕ್ಷ ಮಹೆಬೂಬ ಕುಳಗೇರಿ ಮಾತನಾಡಿ, ಬೀದಿ ಬದಿ ವ್ಯಾಪಾರಿಗಳೊಂದಿಗೆ ಗುತ್ತಿಗೆದಾರ ಏಕವಚನದಲ್ಲಿ ಮಾತನಾಡುತ್ತಾರೆ. ಹಳ್ಳಿಗಳಿಂದ ಪುಟ್ಟಿ ಕಾಯಿಪಲ್ಯೆ ತಂದವರಿಂದಲೂ 20-30 ರೂ. ವಸೂಲಿ ಮಾಡುತ್ತಾರೆ ಎಂಬ ದೂರುಗಳಿದ್ದು ಇದಕ್ಕೆ ಕಡಿವಾಣ ವಿಧಿಸಬೇಕು ಎಂದು ಆಗ್ರಹಿಸಿದರು.
ಆಸೀಫ ನಿಡಗುಂದಿ, ಬಾಬಾಜಾನ ಮಮದಾಪೂರ, ಸಂಗಮೇಶ ಅತ್ತಾರ, ರಹೆಮಾನ ಹಳ್ಳೂರ, ಶರಣಪ್ಪ ಹೊಸಮನಿ, ಅಬ್ದುಲರಜಾಕ ಕಲಾದಗಿ, ಸಂತೋಷ ಚವ್ಹಾಣ ಇದ್ದರು. ಸೂಕ್ತ ಕ್ರಮ ಕೈಗೊಳ್ಳುವುದಾಗಿ ಮುಖ್ಯಾಧಿಕಾರಿಗಳು ತಿಳಿಸಿದರು. ಪಿಎಸೈ ಸಂಜಯ ತಿಪರೆಡ್ಡಿ ಭದ್ರತೆ ಒದಗಿಸಿದ್ದರು.