ಮುದ್ದೇಬಿಹಾಳ : ಹುಲ್ಲೂರು ಗ್ರಾಮ ಪಂಚಾಯಿತಿಯಲ್ಲಿ 40 ಕೂಲಿಕಾರರು ಕೆಲಸ ಮಾಡಿದ್ದು ಅವರಿಗೆ ಬಿಲ್ ಪಾವತಿಸುವಂತೆ ಕೇಳಿದರೆ ಇಲ್ಲಿನ ತಾಪಂ ಕಚೇರಿಯ ಜೆ.ಇ ಉಮೇಶ ಕನ್ನಿ, ತಾಲ್ಲೂಕ ಸಂಯೋಜಕ ಶಂಕರಗೌಡ ಯಾಳವಾರ ಪರ್ಸೆಂಟೇಜ್‌ಗೆ ಬೇಡಿಕೆ ಇಡುತ್ತಿದ್ದಾರೆ. ಪರ್ಸೆಂಟೇಜ್ ಕೊಡದಿದ್ದರೆ ಬಿಲ್ ಮಾಡುವುದಿಲ್ಲ ಎಂದು ಹೇಳುತ್ತಿದ್ದಾರೆ ಎಂದು ಆರೋಪಿಸಿ ತಾಲ್ಲೂಕಿನ ಹುಲ್ಲೂರು ಗ್ರಾಪಂ ಸದಸ್ಯ ಶಿವಾನಂದ ಲಮಾಣಿ ತಾಪಂ ಕಚೇರಿ ಮುಂದೆ ಗುರುವಾರ ದಿಢೀರ್ ಧರಣಿ ನಡೆಸಿದರು.
ತಾಪಂ ಕಚೇರಿ ಮುಂದೆ ಏಕಾಂಗಿಯಾಗಿ ಧರಣಿ ನಡೆಸುತ್ತಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ತಾಲ್ಲೂಕಿನ ಹುಲ್ಲೂರ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಎಮ್.ಜಿ.ಎನ್.ಆರ್.ಜಿ ಬಿಲ್ ಪಾವತಿಸದೇ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಜು. 4 ರಂದು ಕಾಮಗಾರಿ ಮುಕ್ತವಾಗಿದ್ದು ಸರಕಾರದ ಸುತ್ತೋಲೆಯಲ್ಲಿ ಕೂಲಿಕಾರ ಬಿಲ್ ಪಾವತಿಸಲು ಕೆಲಸ ಮುಗಿದ ಮೂರು ದಿನಗಳಲ್ಲಿ ಬಿಲ್‌ಪಾವತಿಸಲು ಆದೇಶ ಇದ್ದರೂ ಇಲ್ಲಿನ ಅಧಿಕಾರಿಗಳು ಎಂ.ಐ.ಎಸ್ ಮಾಡಲು ನಿರಾಕರಿಸಿದ್ದಾರೆ ಎಂದು ದೂರಿದರು.
ಈ ಕುರಿತು ತಾಪಂ ಇಒ ಗಮನಕ್ಕೆ ತಂದರೂ ಅವರು ಕೂಲಿಕಾರರ ಕೂಲಿ ಪಾವತಿಗೆ ಸಂಬಂಧಿಸಿದವರಿಗೆ ಸೂಚಿಸದೇ ಮೌನವಾಗಿದ್ದಾರೆ. ಲಂಚ ಕೊಡದಿದ್ದರೆ ಬಿಲ್ ಮಾಡುವುದಿಲ್ಲ. ಯಾರ ಮುಂದೆ ಹೇಳಿಕೊಳ್ಳುತ್ತಿರೋ ಹೇಳಿಕೊಳ್ಳಿ ಎಲ್ಲರಿಗೂ ನಾವು ಲಂಚ ಮುಟ್ಟಿಸುತ್ತೇವೆ ಎಂದು ಹೇಳಿದ್ದು ಇವರನ್ನು ಸೇವೆಯಿಂದ ಅಮಾನತುಗೊಳಿಸಬೇಕು ಎಂದು ಅವರು ಆಗ್ರಹಿಸಿದರು.
ಏಕಾಂಗಿಯಾಗಿ ಧರಣಿ ನಡೆಸುತ್ತಿದ್ದ ಗ್ರಾಪಂ ಸದಸ್ಯ ಶಿವಾನಂದ ಅವರನ್ನು ಭೇಟಿ ಮಾಡಿದ ತಾಪಂ ಯೋಜನಾಧಿಕಾರಿ ಖೂಭಾಸಿಂಗ ಜಾಧವ, ನೀವು ಇಲ್ಲಿ ಪ್ರತಿಭಟನೆ ಮಾಡಿದರೆ ಯಾರೂ ಕೇಳುವುದಿಲ್ಲ. ಜಿಪಂ ಆವರಣದಲ್ಲಿ ಧರಣಿ ಮಾಡಿ ಎಂದು ಬೇಜವಬ್ದಾರಿಯಿಂದ ಉತ್ತರಿಸಿದ್ದಾರೆ ಎಂದು ಆರೋಪಿಸಿದರು.