ಮುದ್ದೇಬಿಹಾಳ : ಶರಣರು ವಚನಗಳನ್ನು ಬರೆದರೆ ಅವುಗಳನ್ನು ಸಂಗ್ರಹಿಸಿ ಸಮಾಜಕ್ಕೆ ಪಸರಿಸಿದ ಫ. ಗು. ಹಳಕಟ್ಟಿ ವಚನ ಸಾಹಿತ್ಯವನ್ನು ಬೆಳೆಸಿದ್ದಾರೆ ಎಂದು ಚಿಂತಕಿ ಸೀಮಾ ದಂಡಾವತಿ ಹೇಳಿದರು.
ಪಟ್ಟಣದ ಮಾರುತಿ ನಗರದಲ್ಲಿ ಸುರೇಶ ಬಾದರಬಂಡಿ ಅವರ ಮನೆಯಲ್ಲಿ ಗುರುವಾರ ಶರಣ ಸಾಹಿತ್ಯ ಪರಿಷತ್ ಹಾಗೂ ಕದಳಿ ವೇದಿಕೆ,ಬಸವ ಮಹಾಮನೆ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಶರಣ ಬೆಳಗು ಅನುಭಾವ ಮಾಲೆ -40 ಸಂಚಿಕೆಯ ಹುಣ್ಣಿಮೆಯ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶಿಕ್ಷಕ ರುದ್ರೇಶ ಕಿತ್ತೂರ ಮಾತನಾಡಿ, ಡಾ.ಫ.ಗು.ಹಳಕಟ್ಟಿ ಅವರು ವಚನ ಗುಮ್ಮಟ ಎಂದು ಖ್ಯಾತರಾದವರು. ಅವರಿಂದಲೇ ವಚನ ಸಾಹಿತ್ಯ ಉಳಿಯಿತು. ಬೆಳೆದು ಹರಡಲು ಸಾಧ್ಯವಾಯಿತು. ವಚನಶಾಸ್ತ್ರ ಸಾರ 3 ಸಂಪುಟಗಳು, ಹರಿಹರನ ರಗಳೆ, ಶೂನ್ಯ ಸಂಪಾದನೆ ಶಿವಶರಣ ಚರಿತ್ರೆ, ಅಮರ ಗಣಾಧಿಶ್ವರರ ಚರಿತ್ರೆ ಅತ್ಯಂತ ಮಹತ್ವದ ಕೃತಿಗಳಾಗಿವೆ ಎಂದು ಹೇಳಿದರು.
ಶಿಕ್ಷಕಿ ರಾಜೇಶ್ವರಿ ಕಡಿ ಮಾತನಾಡಿ, ಹಡಪದ ಅಪ್ಪಣ್ಣನವರು ಬಸವಣ್ಣನವರ ಆಪ್ತ ಕಾರ್ಯದರ್ಶಿ. ತಾಂಬೂಲುವನ್ನು ಒದಗಿಸುವ ಅಚ್ಚುಮೆಚ್ಚಿನ ಶರಣಾಗಿದ್ದರು. ಭೌತಿಕದಲ್ಲಿ ಮಾತ್ರವಲ್ಲ ಪಾರಮಾರ್ಥಿಕ ವಿಷಯಗಳಲ್ಲಿಯೂ ಬಸವಣ್ಣನವರಿಗೆ ಸಹಾಯಕರಾಗಿದ್ದರು ಎಂದರು.
ಕದಳಿ ವೇದಿಕೆ ಅಧ್ಯಕ್ಷೆ ಕಾಶಿಬಾಯಿ ರಾಂಪೂರ , ನಿವೃತ್ತ ಮುಖ್ಯಶಿಕ್ಷಕಿ ಡಿ.ಬಿ.ಗುರಿಕಾರ, ಕುಷ್ಟಗಿಯ ರಮೇಶ ಸ್ವಾಮೀಜಿ, ಮಹಾದೇವಿ ನಾಲತವಾಡ ಮಾತನಾಡಿದರು. ಚೌಡಮ್ಮ ಶಿವಯೋಗಿಮಠ ಸ್ವಾಗತಿಸಿದರು. ಸರೋಜಾ ಕೋರಿ ನಿರೂಪಿಸಿದರು. ಕದಳಿ ವೇದಿಕೆ, ಶರಣ ಸಾಹಿತ್ಯ ಪರಿಷತ್, ಮನೆಯಲ್ಲಿಮಹಾಮನೆ ಬಳಗದ ಸದಸ್ಯರು ಇದ್ದರು.