ಮುದ್ದೇಬಿಹಾಳ : ಜಾತಿಗೊಬ್ಬ ಗುರುವನ್ನು ಮಾಡಿದ್ದರಿಂದ ವೀರಶೈವ ಲಿಂಗಾಯತ ಧರ್ಮ ಹಾಳಾಗಿ ಹೋಗಿದೆ. ಜಾತಿಗೊಬ್ಬ ಗುರು ಮಾಡಿದವ ಜೈಲು ಸೇರಿದ ಎಂದು ಹಿರೂರು ಅನ್ನದಾನೇಶ್ವರ ಮಠದ ಜಯಸಿದ್ದೇಶ್ವರ ಸ್ವಾಮೀಜಿ ಹೇಳಿದರು.
ಪಟ್ಟಣದ ಆಲಮಟ್ಟಿ ರಸ್ತೆಯಲ್ಲಿರುವ ಗಜದಂಡ ಶಿವಾಚಾರ್ಯರ ಮಠದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಗುರುಪೌರ್ಣಿಮೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಾಜ್ಯದಲ್ಲಿ 3-4 ಕಾವಿಧಾರಿಗಳು ಧರ್ಮವನ್ನು ಕೆಡಿಸಿದ್ದಾರೆ. ಕಂಡ ಕಂಡವರಿಗೆಲ್ಲ ಸ್ವಾಮಿಗಳೆಂದು ಕಾಲು ಮುಗಿಯಬೇಡಿ. ಕೆಲ ಕಾವಿಧಾರಿಗಳು ವೀರಶೈವ ಲಿಂಗಾಯತ ಧರ್ಮ ಒಡೆಯಲು ಮುಂದಾಗಿದ್ದಾರೆ. ಗುರುವಿನ ಹಿನ್ನೆಲೆ ಅರಿತು ಕಾಲು ಮುಗಿಯಬೇಕು. ಶಿಶುನಾಳ ಷರೀಫ, ಸಜ್ಜಲಗುಡ್ಡ ಶರಣಮ್ಮ, ಸಿದ್ಧಾರೂಢರು, ಗಜದಂಡ ಶಿವಾಚಾರ್ಯರು ದೇವರನ್ನು ತೋರಿಸುವ ಗುರುಗಳಾಗಿದ್ದರು ಎಂದರು.
ಸಿದ್ಧನಕೊಳ್ಳದ ಶಿವಕುಮಾರ ಸ್ವಾಮೀಜಿ ಮಾತನಾಡಿ, ಸ್ವಾಮಿಗಳು ಹಲವರಿದ್ದು ಸ್ವಾಮಿತ್ವ ಪಡೆವರೆಷ್ಟು ಲೆಕ್ಕ ಹಾಕಿ ನೋಡಿದರೆ ಕಳವಳ ಉಂಟಾಗುತ್ತದೆ. ಸ್ವಾಮಿಯಾಗುವುದು ಈಗ ಉದ್ಯೋಗವಾಗಿದೆ. ತಂದೆ, ತಾಯಿ, ಸಂಸ್ಕಾರ ನೀಡುವ ಶಿಕ್ಷಕರು, ರೈತರು, ಸೈನಿಕರು ಗುರುಗಳಾಗಿದ್ದಾರೆ ಎಂದರು.
ಸರೂರು-ಅಗತೀರ್ಥ ಹಾಲುಮತ ಗುರುಪೀಠದ ರೇವಣಸಿದ್ದೇಶ್ವರ ಸ್ವಾಮೀಜಿ, ಸಾಹಿತಿ ಬಿ. ಎಂ. ಹಿರೇಮಠ, ಕನ್ನೂರಿನ ಚಂದ್ರಶೇಖರ ಮಹಾರಾಜರು, ಉದ್ಯಮಿ ಟಿ. ವಿಜಯಭಾಸ್ಕರ್, ಜಮ್ಮಲದಿನ್ನಿ ಸಿದ್ಧರಾಮದೇವರು, ಸಂತೋಷ ಶಾಸ್ತ್ರಿ ಸುಶೀಲಮ್ಮ ಶರಣೆ ಇದ್ದರು. ಗಜದಂಡ ಹಾಗೂ ಸಿದ್ದಾರೂಢ ಸ್ವಾಮೀಜಿಗಳ ಚಿತ್ರವನ್ನು ಮೆರವಣಿಗೆ ನಡೆಸಲಾಯಿತು.