ಮುದ್ದೇಬಿಹಾಳ : ನಾನು ಮತಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದರಿಂದಲೇ ಜನ ಬೆಂಬಲಿಸಲಿಲ್ಲವೋ ಏನೋ ಆದರೆ ರೈತರ ಮಕ್ಕಳು ಕಷ್ಟ ಅನುಭವಿಸಬಾರದು ಎಂಬ ಉದ್ದೇಶದಿಂದ ನಾನು ಮಣ್ಣಿಗೆ ಹೋಗುವ ಮುನ್ನ 10 ಸಾವಿರ ಉದ್ಯೋಗ ಕೊಟ್ಟು ಹೋಗುತ್ತೇನೆ ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಭಾವುಕರಾಗಿ ಹೇಳಿದರು.
ಪಟ್ಟಣದ ಮಾರುತಿ ನಗರದಲ್ಲಿರುವ ತಮ್ಮ ಫಾರ್ಮಹೌಸ್‌ನಲ್ಲಿ ಮಂಗಳವಾರ ಅಭಿಮಾನಿಗಳು, ಕಾರ್ಯಕರ್ತರು ಹಮ್ಮಿಕೊಂಡಿದ್ದ ತಮ್ಮ 56ನೇ ಜನ್ಮದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಾವೆಲ್ಲ ಜಾತಿ ವಿಷಯ ಬಂದಾಗ ಒಗ್ಗಟ್ಟು ಆಗುತ್ತೇವೆ. ಆದರೆ ಜನರ ಬದುಕು ಕಟ್ಟುವ ನಾಯಕತ್ವವನ್ನು ಆಯ್ಕೆ ಮಾಡಿಕೊಳ್ಳುವುದರಲ್ಲಿ ಎಡವಿದ್ದೇವೆ. ಆಧುನಿಕ ಬದುಕು ಕಟ್ಟಿಕೊಡುವ, ಸೌಲಭ್ಯಗಳನ್ನು ಜನರಿಗೆ ತಲುಪಿಸುವ ನಾಯಕತ್ವ ಬೇಕು. ತೊಗರಿ ಬೆಳೆ ನಷ್ಟವಾದರೂ ಈ ಸರ್ಕಾರದಿಂದ ಒಂದು ರುಪಾಯಿ ಪರಿಹಾರ ಬಂದಿಲ್ಲ. ಬರುವುದೂ ಇಲ್ಲ. ಈ ಸರ್ಕಾರ,ಈಗ ನೀವು ಆಯ್ಕೆಮಾಡಿಕೊಂಡ ಜನಪ್ರತಿನಿಧಿ ಹಾಗೆ ಇದ್ದಾರೆ. ರೈತರು ಬೆಳೆ ಇನ್ಸೂರೆನ್ಸ್ ಬಂದಿಲ್ಲ ಎಂದು ಕೇಳುತ್ತಿದ್ದಾರೆ. ಅವರಿಗೆಲ್ಲ ಈಗ ನೀವು ಬಾಯಿ ಬಡಿದುಕೊಳ್ಳಿ ಎಂದೇ ಹೇಳಿದ್ದೇನೆ ಎಂದು ತಿಳಿಸಿದರು.
ನೀರಾವರಿ ಯೋಜನೆಗಳು ಅಲ್ಲಿಗೆ ನಿಂತಿವೆ. ನಾಗರಬೆಟ್ಟ ಏತ ನೀರಾವರಿ ಯೋಜನೆ ಏನಾಗಿದೆ. ಬೂದಿಹಾಳ ಪೀರಾಪೂರ ಯೋಜನೆಗಾಗಿ ರೈತರು ಹೋರಾಟ ನಡೆಸುವಾಗ ನಾನು ಹೋರಾಟಕ್ಕೆ ಬೆಂಬಲಿಸುವುದಾಗಿ ಹೇಳುತ್ತಲೇ ಉಸ್ತುವಾರಿ ಸಚಿವರು ಓಡಿ ಬಂದು ಭರವಸೆ ಕೊಟ್ಟು ಹೋದರು. ನೀರಾವರಿಗಾಗಿ ಹೋರಾಟ ಅನಿವಾರ್ಯ ಎಂಬಂತಾಗಿದೆ ಎಂದರು.
ಮತಕ್ಷೇತ್ರದಲ್ಲಿ ಕುಡಿವ ನೀರಿನ ಯೋಜನೆ ಸಲುವಾಗಿ ಸಿಸಿ ರಸ್ತೆ ಹಾಳುಮಾಡುತ್ತಿದ್ದಾರೆ. ಆಯ್ಕೆಯಾದವರು ನಿಮ್ಮೂರಿಗೆ ಬಂದು ಧನ್ಯವಾದ ಕೂಡಾ ಹೇಳಲಿಲ್ಲ. ಮೊದಲು ಅವರಿಗೆ ಹಳ್ಳಿಗಳ ಜನಕ್ಕೆ ನೀರು ಕೊಡಲು ತಿಳಿಸಿ. ನನ್ನ ದುಡಿಮೆಯಲ್ಲಿ ಅರ್ಧ ರಾಜಕಾರಣಕ್ಕೆ, ದಾಸೋಹ ಕ್ಕೆ ವ್ಯಯ ಮಾಡಿದ್ದೇನೆ. ನನಗೆ ಮಂತ್ರಿಯಾಗಿ ಮೆರೆಯಬೇಕು ಎಂಬ ಭಾವನೆ ಇಲ್ಲ. ರೈತರ ಮಕ್ಕಳು ತಮ್ಮ ತಂದೆಯವರು ಅನುಭವಿಸಿದ ಕಷ್ಟ ಅನುಭವಿಸಬಾರದು ಎಂಬ ಕಾರಣದಿಂದ ರಾಜಕಾರಣಕ್ಕೆ ಬಂದಿದ್ದೇನೆ. ಇದು ಕೇವಲ ಭಾಷಣಕ್ಕಾಗಿ ಮಾತಲ್ಲ ಸಂಕಲ್ಪದಿಂದ ಮಾತನಾಡುತ್ತಿದ್ದೇನೆ ಎಂದು ಹೇಳಿದರು. ಬಿಜೆಪಿ ಮುಖಂಡರಾದ ರಮೇಶ ಬಿದನೂರ, ರವಿಕಾಂತ ಬಗಲಿ, ಪ್ರಭುಗೌಡ ಬಿರಾದಾರ, ಪ್ರಭು ಕಡಿ, ಬಿ.ಪಿ.ಕುಲಕರ್ಣಿ, ಮಲಕೇಂದ್ರಗೌಡ ಪಾಟೀಲ, ಗಂಗಾಧರ ನಾಡಗೌಡ, ರವೀಂದ್ರ ಲೋಣಿ, ಎಂ.ಬಿ.ಅಂಗಡಿ, ಎಂ.ಎಸ್.ಪಾಟೀಲ, ಸುಮಂಗಲಾ ಕೋಟಿ, ಕೆ.ವಾಯ್.ಬಿರಾದಾರ, ಮಹದೇವಯ್ಯ ಶಾಸ್ತ್ರೀಗಳು, ಪುರಸಭೆ ಸದಸ್ಯೆ ಸಹನಾ ಬಡಿಗೇರ ಮಾತನಾಡಿದರು. ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಸೇರಿದಂತೆ ಪಕ್ಷದ ಮುಖಂಡರು ಇದ್ದರು.
ನಡಹಳ್ಳಿಯವರ ಜನ್ಮದಿನದ ಅಂಗವಾಗಿ ಅವರ ಅಭಿಮಾನಿಗಳು, ಕಾರ್ಯಕರ್ತರು ರಕ್ತದಾನ ಶಿಬಿರ,ಆರೋಗ್ಯತಪಾಸಣಾ ಶಿಬಿರ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ನಡೆಸಿದರು.
ಸಚಿವ ಎಂ.ಬಿ.ಪಾಟೀಲ್‌ರಿಗೆ ಟಾಂಗ್: ನೀರಾವರಿ ಭಗೀರಥ ಎಂದು ಕರೆಯಿಸಿಕೊಳ್ಳುವ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲರ ಮತಕ್ಷೇತ್ರದಲ್ಲಿ ರಸ್ತೆಗಳ ಸ್ಥಿತಿ ಹೇಳುವಂತಿಲ್ಲ. ಬಬಲೇಶ್ವರ, ಸಿಂದಗಿ, ನಾಗಠಾಣ ಕ್ಷೇತ್ರದ ಒಳಗಡೆ ಹೋಗಿ ಹೊರಬರಲು ಆಗುವುದಿಲ್ಲ ಎಂದು ಮಾಜಿ ಶಾಸಕ ನಡಹಳ್ಳಿ ಟೀಕಿಸಿದರು.
ಕನಸು : ಮುದ್ದೇಬಿಹಾಳ ಮತಕ್ಷೇತ್ರದಂತಹ ಸಂಪನ್ಮೂಲ ಹೊಂದಿರುವ ತಾಲ್ಲೂಕು ರಾಜ್ಯದಲ್ಲಿ ಬೇರಾವುದು ಇಲ್ಲ. ಇಲ್ಲಿ 48 ಕೆರೆ ಇರುವ ಎರಡು ಡ್ಯಾಮ್‌ಗಳನ್ನು ಹೊಂದಿಕೊಂಡಿರುವ ತಾಲ್ಲೂಕು ಮುದ್ದೇಬಿಹಾಳ ಆಗಿದೆ. ಕನಸು ಹೊತ್ತಿರುವ ನಾಯಕರನ್ನು ನೀವು ಆಯ್ಕೆ ಮಾಡಿಕೊಳ್ಳಿ. ಹತ್ತು ಕೋಟಿ ವಚ್ಚದಲ್ಲಿ ಹೈನುಗಾರಿಕೆ ತರಬೇತಿ ಕೇಂದ್ರ ಮಾಡುತ್ತೇನೆ. ನಮ್ಮ ರೈತರು ಭೂಮಿಗೆ ಏನು ಬೇಕು ಎಂಬುದನ್ನು ತಿಳಿದುಕೊಂಡು ಒಕ್ಕಲುತನ ಮಾಡಬೇಕು.ರೈತನ ಬದುಕು ಹಸನು ಮಾಡಬೇಕು ಎಂಬುದು ನನ್ನ ಕನಸು ಎಂದು ಮಾಜಿ ಶಾಸಕ ನಡಹಳ್ಳಿ ಹೇಳಿದರು.
ನಾಡಗೌಡ, ಭೈರೇಗೌಡರ ವಿರುದ್ಧವೂ ವಾಗ್ದಾಳಿ: ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ಅಭಿವೃದ್ಧಿಪಡಿಸಲು ಆಲಮಟ್ಟಿ ಜಲಾಶಯ ಎತ್ತರಿಸಿದರೆ ರೈತರಿಗೆ ಭೂಸ್ವಾಧೀನಗೊಂಡ ಜಮೀನುಗಳಿಗೆ ಪರಿಹಾರ ಕೊಡುವುದು ಹೆಚ್ಚುವರಿ ನಷ್ಟವೆಂದು ಕೃಷಿ ಸಚಿವ ಕೃಷ್ಣ ಭೈರೇಗೌಡ ಎಲ್ಲೋ ಕೂತುಕೊಂಡು ಭಾಷಣ ಮಾಡುತ್ತಾನೆ. ಭೈರೇಗೌಡ ಅವನೇನು ಅವರ ಅಪ್ಪನ ಮನೆಯಿಂದ ರೈತರಿಗೆ ಪರಿಹಾರ ಕೊಡುತ್ತಾನಾ?. ನಮ್ಮ ರೈತರ ಜಮೀನುಗಳು ಕಳೆದುಕೊಂಡಿರುತ್ತಾರೆ.ಅವರಿಗೆ ಪರಿಹಾರ ಸಿಗಬೇಕು ಎಂದು ನಡಹಳ್ಳಿ ಭೈರೇಗೌಡ ವಿರುದ್ದ ವಾಗ್ದಾಳಿ ನಡೆಸಿದರು.
ಮುದ್ದೇಬಿಹಾಳ ಮತಕ್ಷೇತ್ರಕ್ಕೆ ಈಗ ಆಯ್ಕೆಯಾದವರು ಒಂದೇ ಒಂದು ಪಂಚಾಯಿತಿಗೆ ಹನ್ನೆರಡು ತಾಸು ಕರೆಂಟ್ ಕೊಡಲು ಆಗುತ್ತದೆಯೇ? ಎಂಬುದನ್ನು ತೋರಿಸಿಕೊಡಲಿ ಎಂದು ಸವಾಲು ಹಾಕಿದ ಮಾಜಿ ಶಾಸಕ ನಡಹಳ್ಳಿ, ನಾನು ಇಡೀ ತಾಲ್ಲೂಕಿಗೆ 12 ತಾಸು ವಿದ್ಯುತ್ ಕೊಡುತ್ತೇನೆ.
ನನ್ನ ಅವಧಿಯಲ್ಲಿ ಹತ್ತು ವಿದ್ಯುತ್ ಸ್ಟೇಷನ್ ತಂದಿದ್ದೇವೆ. ಆಗ ಏಳು ತಾಸು ಕೊಡುತ್ತಿದ್ದರು. ಈಗಲೂ ಅಷ್ಟೇ ವಿದ್ಯುತ್ ಕೊಡುತ್ತಿದ್ದಾರೆ. ಇವರಿಂದ ಎರಡೂವರೆ ವರ್ಷದಲ್ಲಿ ಹೆಚ್ಚಿಗೆ ವಿದ್ಯುತ್ ಕೊಡುವುದಕ್ಕೆ ಆಗಿಲ್ಲ ಎಂದು ಶಾಸಕ ನಾಡಗೌಡರ ಹೆಸರು ಹೇಳದೇ ಟೀಕಿಸಿದರು.