ಬೆಂಗಳೂರು, ಆಗಸ್ಟ್ 20: ಕರ್ನಾಟಕ ವೇದಿಕೆ ಆಧಾರಿತ ಗಿಗ್ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ಧಿ ವಿಧೇಯಕಕ್ಕೆ ಬುಧವಾರ ವಿಧಾನ ಪರಿಷತ್ ನಲ್ಲಿ ಅಂಗೀಕಾರ ದೊರೆಯಿತು. ಮಂಗಳವಾರ ಈ ಮಸೂದೆಗೆ ವಿಧಾನಸಭೆಯಲ್ಲಿ ಅಂಗೀಕಾರ ದೊರೆತಿತ್ತು.
ವಿಧೇಯಕವನ್ನು ಪರ್ಯಾವಲೋಚನೆಗೆ ಮಂಡಿಸಿ ಮಾತನಾಡಿದ ಸಚಿವ ಸಂತೋಷ್ ಎಸ್ ಲಾಡ್ ಅವರು, ಗಿಗ್ ಕಾರ್ಮಿಕರು ಎಂದರೆ ಯಾರು, ವಿಧೇಯಕದ ಪ್ರಮುಖ ಅಂಶಗಳು, ಮಂಡಳಿ ರಚನೆ, ಕಾರ್ಮಿಕರಿಗೆ ಸಾಮಾಜಿಕ ಸೇವಾ ಸೌಲಭ್ಯ ಕಲ್ಪಿಸಲು ಬೇಕಾದ ನಿಧಿಗೆ ಸೆಸ್ ಸಂಗ್ರಹ ಮತ್ತಿತರ ಅಂಶಗಳನ್ನು ಸದನಕ್ಕೆ ವಿವರಿಸಿದರು.
ಪ್ರಶಂಸೆ ವ್ಯಕ್ತಪಡಿಸಿದ ಸದಸ್ಯರು: ವಿಧೇಯಕದ ಕುರಿತು ಮಾತನಾಡಿದ ಹಲವು ಸದಸ್ಯರು ಪ್ರಶಂಸೆ ವ್ಯಕ್ತಪಡಿಸಿದರು. ಇದೊಂದು ಐತಿಹಾಸಿಕ ಮಸೂದೆ. ಸರ್ಕಾರ ಒಳ್ಳೆಯ ಕ್ರಮಕ್ಕೆ ಮುಂದಾಗಿದೆ ಎಂದರು.
ಸದಸ್ಯರಾದ ಐವನ್ ಡಿಸೋಜ, ಎಚ್ ವಿಶ್ವನಾಥ್, ಸಿ ಟಿ ರವಿ, ಕೆ ಎಸ್ ನವೀನ್. ಡಿ ಎಸ್ ಅರುಣ್, ಪ್ರತಾಪ್ ಸಿಂಹ ನಾಯಕ್, ಎನ್ ರವಿ ಕುಮಾರ್ ಹಾಗೂ ಟಿ ಎ ಶರವಣ ಅವರು ಮಾತನಾಡಿದರು.
ಕಾನೂನಿನ ಹಾದಿ ಸುಗಮ: ಕರ್ನಾಟಕ ವೇದಿಕೆ ಆಧಾರಿತ ಗಿಗ್ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ಧಿ ವಿಧೇಯಕವು ವಿಧಾನ ಮಂಡಲದ ಉಭಯ ಸದನದಲ್ಲಿ ಅಂಗೀಕಾರಗೊಂಡಿರುವುದರಿಂದ ಕಾನೂನಿ ಹಾದಿ ಸುಗಮವಾಗಿದೆ. ಇದರೊಂದಿಗೆ ಕಾರ್ಮಿಕ ಇಲಾಖೆಯ ಮಹತ್ವದ ಮತ್ತೊಂದು ಕ್ರಮ ಜಾರಿಯಾಗಲಿದೆ. ಲಕ್ಷಾಂತರ ಗಿಗ್ ಕಾರ್ಮಿಕರ ಹಿತ ಕಾಪಾಡುವಲ್ಲಿ ಈ ಮಸೂದೆಯೂ ಮಹತ್ವದ ಪಾತ್ರ ವಹಿಸಲಿದೆ.