ಮುದ್ದೇಬಿಹಾಳ : ರಾಜ್ಯ ಸರ್ಕಾರ ಆರಂಭಿಸಿರುವ ಸಾಮಾಜಿಕ,ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ಕುರಿತು ಒಂದೇ ವೇದಿಕೆಯಲ್ಲಿ ಭಾನುವಾರ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ಮಧ್ಯೆ ವಿಭಿನ್ನ ಹೇಳಿಕೆಗಳಿಗೆ ಇಲ್ಲಿ ನಡೆದ ಬಣಜಿಗ ಸಮಾಜದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಸಾಕ್ಷಿಯಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಸಿಎಂ, ಬೆಳಗಾವಿ ಸಂಸದ ಜಗದೀಶ ಶೆಟ್ಟರ್, ವೀರಶೈವ ಲಿಂಗಾಯತ ಧರ್ಮಕ್ಕೆ ಅಧಿಕೃತ ಮಾನ್ಯತೆ ಇನ್ನೂ ದೊರಕಿಲ್ಲ. ಹಾಗಾಗಿ ಎಲ್ಲರೂ ಧರ್ಮದ ಕಾಲಂನಲ್ಲಿ ಹಿಂದೂ ಎಂದೇ ಬರೆಯಿಸಬೇಕು.ಹುಬ್ಬಳ್ಳಿಯಲ್ಲಿ ಈಚೇಗೆ ಮಠಾಧೀಶರ ತೀರ್ಮಾನವೂ ಅದೇ ಆಗಿದೆ ಎಂದಾಗ ಅದಕ್ಕೆ ವೇದಿಕೆಯಲ್ಲಿದ್ದ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ,ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅನುಮೋದಿಸಿದರು.
ಆದರೆ ಕಾಂಗ್ರೆಸ್ ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ, ಕೆಲವರ ಲಾಭಕ್ಕೋಸ್ಕರ ತಮ್ಮ ಧರ್ಮದ ಹೆಸರನ್ನು ಹೀಗೆ ಬರೆಯಿಸಿ ಎನ್ನುತ್ತಿದ್ದಾರೆ.ಸರ್ಕಾರ ಯಾವುದೇ ಜಾತಿಗಳನ್ನು ಒಡೆಯುತ್ತಿಲ್ಲ.ನಾನು ಲಿಂಗಾಯತ ಎಂದೇ ಬರೆಯಿಸುತ್ತೇನೆ.ನಮ್ಮ ಅಜ್ಜಿಯ ಕಾಲದಿಂದಲೂ ನಾವು ಲಿಂಗಾಯತರು ಎಂದು ಬರೆಸಿದ್ದೇವೆ.ನಮ್ಮದು ದಾಖಲೆಗಳಲ್ಲಿ ಲಿಂಗಾಯತ ಧರ್ಮ ಎಂದೇ ಇದ್ದು ನಾವೆಲ್ಲ ಬಸವಣ್ಣನವರ ಅನುಯಾಯಿಗಳಾಗಿದ್ದೇವೆ.ಧರ್ಮದ ಕಾಲಂನಲ್ಲಿ ಲಿಂಗಾಯತ ಎಂದೇ ಬರೆಯಿಸುವಂತೆ ಹೇಳಿಕೆ ನೀಡುತ್ತೇನೆ ಎಂದು ತಿಳಿಸಿದರು..
ಇದು ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರಲ್ಲೇ ಸಾಮಾಜಿಕ,ಆರ್ಥಿಕ , ಶೈಕ್ಷಣಿಕ ಸಮೀಕ್ಷೆಯ ಕುರಿತು ಧರ್ಮದ ವಿಚಾರದಲ್ಲಿ ವೀರಶೈವ ಲಿಂಗಾಯತ, ಹಿಂದೂ ಪದಗಳ ಕುರಿತು ವಿಭಿನ್ನ ನಿಲುವು ಹೊಂದಿರುವುದು ಬಹಿರಂಗವಾಯಿತು.