ಬೆಂಗಳೂರು: ಮದ್ಯ (liquor) ಪ್ರಿಯರಿಗೆ ಸಂತೋಷದ ಸುದ್ದಿ ಇದು. ಭಾರತದಲ್ಲಿಯೇ ವಿಸ್ಕಿ ತೆಗೆದುಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ. ಕರ್ನಾಟಕದಲ್ಲಿ ಇತ್ತೀಚಿನ ತಿಂಗಳುಗಳಲ್ಲಿ ಮದ್ಯ ಮಾರಾಟದ ಬೆಲೆ ಹಾಗೂ ಬಿಯರ್ ಬೆಲೆ ಸಹ ಹೆಚ್ಚಳವಾಗಿತ್ತು.
ಇದರ ನಡುವೆಯೂ ಮದ್ಯ ಮಾರಾಟ ದೇಶದಲ್ಲೇ ಹೆಚ್ಚಾಗಿ ಕರ್ನಾಟಕದಲ್ಲಿ ಆಗಿರುವುದು ಅಚ್ಚರಿ ಮೂಡಿಸಿದೆ. ಅದರಲ್ಲೂ ಪ್ರಮುಖ ಮದ್ಯವೊಂದಕ್ಕೆ ಜನ ಫಿದಾ ಆಗಿದ್ದಾರೆ. ಅದು ಯಾವುದು ಏನು ಎನ್ನುವ ಸಂಪೂರ್ಣ ವಿವರ ಇಲ್ಲಿದೆ.
ಕರ್ನಾಟಕದಲ್ಲಿ ನಿರಂತರವಾಗಿ ಮದ್ಯ ಮತ್ತು ಬಿಯರ್ ಬೆಲೆ ಸಹ ಹೆಚ್ಚಾಗುತ್ತಲ್ಲೇ ಇದೆ. ಕರ್ನಾಟಕ ಸರ್ಕಾರವು ಮದ್ಯದ ಬೆಲೆಯನ್ನು ಹೆಚ್ಚಳ ಮಾಡಿದಾಗ, ಮದ್ಯ ಕಂಪನಿಗಳು ಹಾಗೂ ಮದ್ಯ ಪ್ರಿಯರಿಂದಲೂ ವಿರೋಧ ವ್ಯಕ್ತವಾಗುತ್ತಿತ್ತು. ಅಲ್ಲದೇ ಮದ್ಯದ ಬೆಲೆಯನ್ನು ನಿರಂತರವಾಗಿ ಹೆಚ್ಚಳ ಮಾಡುವುದರಿಂದ ಮದ್ಯ ಮಾರಾಟದ ಮೇಲೆ ಪರಿಣಾಮ ಬೀರಲಿದೆ ಎಂದು ಹೇಳಲಾಗಿತ್ತು. ಆದರೆ ಈ ಎಲ್ಲಾ ಲೆಕ್ಕಾಚಾರಗಳು ಇದೀಗ ತಲೆಕೆಳಗಾಗಿವೆ. ಮದ್ಯದ ಬೆಲೆ ಹೆಚ್ಚಳದ ನಡುವೆಯೂ ವಿಸ್ಕಿ ಭರ್ಜರಿ ಮಾರಾಟವಾಗಿದ್ದು, ವಿಸ್ಕಿ ಮಾರಾಟದಲ್ಲಿ ಕರ್ನಾಟಕವು ಹೊಸ ಇತಿಹಾಸವನ್ನೇ ಸೃಷ್ಟಿ ಮಾಡಿದೆ.
ಕಳೆದ ಹಣಕಾಸು ವರ್ಷದಲ್ಲಿ ದೇಶದಲ್ಲಿಯೇ ಒಟ್ಟು 40.17 ಕೋಟಿ ಕೇಸ್‌ನಷ್ಟು ವಿಸ್ಕಿ ಮಾರಾಟವಾಗಿದೆ. ಇದು ಇತ್ತೀಚಿನ ವರ್ಷಗಳಲ್ಲಿ ಹೊಸ ದಾಖಲೆಯಾಗಿದೆ. ಇನ್ನು ಇದರಲ್ಲಿ ಶೇ.58ರಷ್ಟು ವಿಸ್ಕಿ ಮಾರಾಟವು ದಕ್ಷಿಣ ಭಾರತದ ಭಾಗದಲ್ಲೇ ಆಗಿದೆ. ಅಲ್ಲದೇ ಇದರಲ್ಲಿ ಕರ್ನಾಟಕ ದೇಶದಲ್ಲೇ ನಂ.1 ಸ್ಥಾನದಲ್ಲಿದೆ ಎಂದು ಹೇಳಲಾಗಿದೆ. ಸಿಐಎಬಿಸಿ (ಭಾರತೀಯ ಮದ್ಯ ಮಾರಾಟಗಾರರ ಒಕ್ಕೂಟ) ಅಂಕಿ-ಅಂಶವು ಈ ವಿಷಯವನ್ನು ಬಹಿರಂಗಪಡಿಸಿದೆ.
ಸಾಮಾನ್ಯವಾಗಿ ಕರ್ನಾಟಕದಲ್ಲಿ ಬಿಯರ್ ಹೆಚ್ಚು ಮಾರಾಟವಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ವಿಸ್ಕಿಗೂ ಬೇಡಿಕೆ ಹೆಚ್ಚಾಗಿದೆ. ಇಂಡಿಯನ್ ಮೇಡ್ ಫಾರಿನ್ ಲಿಕ್ಕರ್ ವಿಸ್ಕಿ, ರಮ್, ಜಿನ್, ವೋಡ್ಕಾ, ಬ್ರಾಂಡಿ ಸೇರಿದಂತೆ ವಿವಿಧ ಮದ್ಯಗಳ ಮಾರಾಟದಲ್ಲಿ ದಕ್ಷಿಣ ಭಾರತದ ಐದು ರಾಜ್ಯಗಳಾದ ಕರ್ನಾಟಕ, ಆಂಧ್ರ ಪ್ರದೇಶ, ಕೇರಳ, ತಮಿಳುನಾಡು ಮತ್ತು ತೆಲಂಗಾಣ ಅಲ್ಲದೇ ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿ ಮುಂಚೂಣಿಯಲ್ಲಿದೆ ಎಂದು ಹೇಳಲಾಗಿದೆ. ಮಾರ್ಚ್ 31ರ ಆರ್ಥಿಕ ವರ್ಷದಲ್ಲಿ ಅಂತ್ಯದ ವೇಳೆಗೆ ಈ ರಾಜ್ಯಗಳಲ್ಲಿ 23.18 ಕೋಟಿ ಬಾಕ್ಸ್ ವಿಸ್ಕಿ ಮಾರಾಟವಾಗಿದೆ. ಇನ್ನು ದೇಶದ ಉಳಿದ ರಾಜ್ಯಗಳು ಒಟ್ಟಾರೆ ಶೇ.42ರಷ್ಟು ಪಾಲು ಮಾರಾಟವಾಗಿದೆ ಎಂದು ಅಂಕಿ – ಅಂಶವು ಉಲ್ಲೇಖ ಮಾಡಿದೆ.
ದಕ್ಷಿಣದಲ್ಲೇ ಹೆಚ್ಚು:
ಇನ್ನು ವಿಸ್ಕಿ ಮಾರಾಟದಲ್ಲಿ ಕರ್ನಾಟಕವೇ ಪ್ರಥಮ ಸ್ಥಾನದಲ್ಲಿದ್ದಾರೆ. ದಕ್ಷಿಣ ಭಾರತದ ಐದು ರಾಜ್ಯಗಳು ಉತ್ತರ ಭಾರತಕ್ಕೆ ಹೋಲಿಕೆ ಮಾಡಿದರೆ ಮುಂಚೂಣಿಯಲ್ಲಿದೆ. ಕರ್ನಾಟಕದಲ್ಲಿ 6.88 ಕೋಟಿ ಕೇಸ್(ಬಾಕ್ಸ್)ಗಳು ಮಾರಾಟವಾಗುವ ಮೂಲಕ ದೇಶದಲ್ಲೇ ಪ್ರಥಮ ಸ್ಥಾನದಲ್ಲಿದೆ. ಇದಾದ ನಂತರದಲ್ಲಿ ಆಂಧ್ರಪ್ರದೇಶ, ಕೇರಳ, ತಮಿಳುನಾಡು, ತೆಲಂಗಾಣ ಹಾಗೂ ಪುದುಚೇರಿ ಸ್ಥಾನ ಪಡೆದಿವೆ. ಇನ್ನು ಮೊದಲ ಆರು ಸ್ಥಾನಗಳಲ್ಲಿ ದಕ್ಷಿಣ ಭಾರತದ ಪ್ರದೇಶಗಳೇ ಇವೆ.