ಮುದ್ದೇಬಿಹಾಳ : ಕಾಂಗ್ರೆಸ್ ಪಕ್ಷದ ಮುಖಂಡ , ಸಮಾಜ ಸೇವಕ ಶಾಂತಗೌಡ ಪಾಟೀಲ ನಡಹಳ್ಳಿ ಅವರ 43ನೇ ಜನ್ಮದಿನವನ್ನು ಅವರ ಅಭಿಮಾನಿ ಬಳಗದವರು ಇಲ್ಲಿನ ಪಲ್ಲವಿ ಹೊಟೇಲ್‌ನಲ್ಲಿ ಸರಳವಾಗಿ ಮಂಗಳವಾರ ಆಚರಿಸಿದರು.
ಜನ್ಮದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಮಹ್ಮದರಫೀಕ ಶಿರೋಳ, ಹಾಲಿ ಶಾಸಕ ಸಿ.ಎಸ್.ನಾಡಗೌಡ ಅವರ ಗೆಲುವಿನಲ್ಲಿ ಶಾಂತಗೌಡರ ಪಾತ್ರ ಅತ್ಯಂತ ಹಿರಿದಾಗಿದೆ.ಅವರು ಮುಂಬರುವ ದಿನಗಳಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ, ಶಾಸಕರಾಗಿ ಆಯ್ಕೆಯಾಗಿ ಜನಸೇವೆ ಮಾಡಲಿ ಎಂದು ಹೇಳಿದರು.
ಇನ್ನೋರ್ವ ಮುಖಂಡ ಬಸವರಾಜ ಭಜಂತ್ರಿ ಮಾತನಾಡಿ, ಶಾಂತಗೌಡ ಪಾಟೀಲ ನಡಹಳ್ಳಿಯವರು ಕಾಂಗ್ರೆಸ್ ಪಕ್ಷದ ಸಲುವಾಗಿ ಸಾಕಷ್ಟು ಸವಾಲುಗಳನ್ನು ಎದುರಿಸಿದ್ದಾರೆ.ಅವರು ಮುಂಬರುವ ದಿನಮಾನಗಳಲ್ಲಿ ಉನ್ನತ ಸ್ಥಾನದಲ್ಲಿ ಪಕ್ಷದ ನಾಯಕರು ಗುರುತಿಸಬೇಕಾಗಿದೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ ಮಾತನಾಡಿ, ಶಾಂತಗೌಡ ಪಾಟೀಲರು ಒಳ್ಳೆಯ ಸಮಾಜಸೇವಕರು,ಹೋರಾಟಗಾರರು.ಮುಂಬರುವ ದಿನಗಳಲ್ಲಿ ಅವರಿಗೆ ಒಳ್ಳೆಯ ಭವಿಷ್ಯವಿದೆ.ಸಕ್ರಿಯ ರಾಜಕಾರಣದಿಂದ ದೂರವಾದರೆ ಅಭಿಮಾನಿಗಳು ಅನಾಥರಾಗುತ್ತಾರೆ.ಅವರ ಸಲುವಾಗಿ ರಾಜಕಾರಣದಲ್ಲಿ ಇರಿ ಎಂದು ಸಲಹೆ ಮಾಡಿದರು.
ಪಂಚಮಸಾಲಿ ಸಮಾಜದ ಯುವ ಮುಖಂಡ ಕಾಮರಾಜ ಬಿರಾದಾರ ಮಾತನಾಡಿ, ಸಮಾಜ ಸೇವೆ,ಹೋರಾಟದ ಬದುಕಿನ ಮೂಲಕ ಬೆಳೆದಿರುವ ಶಾಂತಗೌಡರು ಮುಂಬರುವ ದಿನಗಳಲ್ಲಿ ತಮ್ಮ ಬಳಿ ಕಷ್ಟ ಎಂದು ಬಂದವರಿಗೆ ಸಹಾಯ ಮಾಡುವ ಶಕ್ತಿಯನ್ನು ಇನ್ನಷ್ಟು ಭಗವಂತ ಅವರಿಗೆ ಕರುಣಿಸಲಿ ಎಂದು ಹೇಳಿದರು.
ಪುರಸಭೆ ಅಧ್ಯಕ್ಷ ಮಹೆಬೂಬ ಗೊಳಸಂಗಿ, ಮುಖಂಡರಾದ ತಿಪ್ಪಣ್ಣ ದೊಡಮನಿ, ಶಾಂತಗೌಡ ಪಾಟೀಲ ನಡಹಳ್ಳಿ ಅವರ ಆಪ್ತ ಹುಲಗಪ್ಪ ನಾಯ್ಕಮಕ್ಕಳ,ಮುಖಂಡ ಮಲ್ಲು ಅಪರಾಧಿ, ಅಬ್ದುಲಮಜೀದ ಶಿರೋಳ,ಗ್ರಾಪಂ ಸದಸ್ಯ ಅಭಿನಂದನ ಕಡೇಹಳ್ಳಿ, ಮಾತನಾಡಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಮುಖಂಡ ಶಾಂತಗೌಡ ಪಾಟೀಲ ನಡಹಳ್ಳಿ , ಅನ್ಯಾಯ,ಭ್ರಷ್ಟಾಚಾರ ಕಂಡರೆ ನನಗೆ ಸಹಿಸುವುದಕ್ಕೆ ಆಗುವುದಿಲ್ಲ.ನಾನು ಸಕ್ರಿಯ ರಾಜಕಾರಣದಿಂದ ದೂರವು ಆಗಿಲ್ಲ.ಕುಟುಂಬ ಸದಸ್ಯರಿಗೆ ಸಮಯ ಕೊಡುವುದಕ್ಕಾಗಿ ತುಸು ಅಂತರವಿದ್ದೇನೆ.ಜಿಲ್ಲಾ ಪಂಚಾಯಿತಿ ಚುನಾವಣೆ ಬಳಿಕ ಪ್ರತಿ ಹಳ್ಳಿಗೂ ಭೇಟಿ ನೀಡಿ ಎಲ್ಲರ ಆಶೀರ್ವಾದ ಪಡೆದುಕೊಳ್ಳುತ್ತೇನೆ ಎಂದು ಹೇಳಿದರು.
ಇವತ್ತಿನ ರಾಜಕಾರಣ ತುಂಬಾ ಹದಗೆಟ್ಟಿದೆ.ತತ್ವಜ್ಞಾನಿ ಪ್ಲೇಟೋ ಹೇಳಿದಂತೆ ರಾಜಕಾರಣ ಮಾಡುವವನಿಗೆ ಕುಟುಂಬ ಇರಬಾರದು ಎಂದಿದ್ದಾರೆ.ಕುಟುಂಬ ಇದ್ದರೆ ಅವರಲ್ಲಿ ಸ್ವಾರ್ಥ ಮನೆ ಮಾಡುತ್ತದೆ.ಹೆಂಡತಿ, ಮಗ, ಮಗಳನ್ನು ಎಂಎಲ್‌ಎ ಎಂದು ಬೆಳೆಸಿಕೊಂಡು ಹೋಗುತ್ತಾರೆ.ಆದರೆ ನಿಜವಾಗಿ ದುಡಿದವರಿಗೆ ನ್ಯಾಯ ಸಿಗುವುದಿಲ್ಲ.ಯುವಕರು ಶಾಸಕರು,ಸಂಸದರ ಮಕ್ಕಳೇ ಮರಳಿ ಶಾಸಕರಾಗಬೇಕು ಎಂಬ ಮನಸ್ಥಿತಿಯಿಂದ ಯುವಕರು ಹೊರಬಂದು ಬೇರೆಯವರನ್ನು ಬೆಳೆಸುವುದಕ್ಕೆ ಮುಂದಾಗಬೇಕು.ಹಣ ಮಾಡುವುದಕ್ಕಾಗಿ ರಾಜಕಾರಣಕ್ಕೆ ಬರಬೇಡಿ.ಜನಸೇವೆ ಮಾಡಲು ರಾಜಕಾರಣ ಆಯ್ಕೆ ಮಾಡಿಕೊಳ್ಳಿ ಎಂದು ಹೇಳಿದರು.
ಪುರಸಭೆ ಸದಸ್ಯ ಶಿವು ಶಿವಪೂರ, ರಾಚಯ್ಯ ಹಿರೇಮಠ, ವಾಲ್ಮೀಕಿ ಸಮಾಜದ ಅಧ್ಯಕ್ಷ ಹುಲಗಪ್ಪ ನಾಯ್ಕಮಕ್ಕಳ,ಯಲ್ಲಪ್ಪ ಮ್ಯಾಗೇರಿ, ಗ್ರಾಪಂ ಸದಸ್ಯ ಮಂಜು ಪೂಜಾರಿ ಸೇರಿದಂತೆ ತಾಲ್ಲೂಕಿನ ವಿವಿಧ ಹಳ್ಳಿಗಳಿಂದ ಆಗಮಿಸಿದ್ದ ಶಾಂತಗೌಡ ಪಾಟೀಲ ನಡಹಳ್ಳಿ ಅವರ ಅಭಿಮಾನಿಗಳು ಇದ್ದರು.