ಮುದ್ದೇಬಿಹಾಳ : ಸಾಲದ ಬಾಧೆ ತಾಳದೇ ರೈತರೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲ್ಲೂಕಿನ ಚಿರ್ಚನಕಲ್ ಗ್ರಾಮದಲ್ಲಿ ಸೋಮವಾರ ನಡೆದಿದೆ.
ಕುಂಟೋಜಿ ಗ್ರಾಮದ ಸಂಗಪ್ಪ ಲಕ್ಕಪ್ಪ ಗೌಡರ(ಬೊಮ್ಮಣಗಿ)(50) ಆತ್ಮಹತ್ಯೆ ಮಾಡಿಕೊಂಡಿರುವ ರೈತ.ಮೃತನ ಹೆಸರಿನಲ್ಲಿ ಕುಂಟೋಜಿ ಸರ್ವೆ ನಂಬರ್ 391/1ರಲ್ಲಿ 4.20 ಎಕರೆ ಜಮೀನು ಇದ್ದು ಇದರಲ್ಲಿ ತೊಗರಿ ಬೆಳೆದಿದ್ದ.ನಾಲ್ಕು ಬೋರವೆಲ್, ಒಂದು ತೆರೆದ ಬಾವಿ ಕೊರೆಸಿದರೂ ನೀರು ಬಿದ್ದಿರಲಿಲ್ಲ.ಇದಕ್ಕಾಗಿ ಮುದ್ದೇಬಿಹಾಳದ ಶ್ರೀ ಸಂಗಮೇಶ್ವರ ಪತ್ತಿನ ಸಹಕಾರಿ ಬ್ಯಾಂಕ್‌ನಲ್ಲಿ ಮೂರು ಲಕ್ಷ, ಕುಂಟೋಜಿ ಪಿಕೆಪಿಎಎಸ್‌ನಲ್ಲಿ 75,000 ರೂ., ಧರ್ಮಸ್ಥಳ ಸಂಘದಲ್ಲಿ ಪತ್ನಿ ಬೋರಮ್ಮಳ ಹೆಸರಿನಲ್ಲಿ 50,000 ರೂ. ಖಾಸಗಿಯಾಗಿ ಎರಡು ಲಕ್ಷ ಕೈಗಡ ಸೇರಿ ಒಟ್ಟು 6.25 ಲಕ್ಷ ಸಾಲ ಮಾಡಿಕೊಂಡಿದ್ದ.
ಜಮೀನಿನಲ್ಲಿ ಹಾಕಿದ್ದ ತೊಗರಿ ಬೆಳೆ ನಿರಂತರ ಮಳೆಗೆ ನಾಶವಾಗಿತ್ತು. ಸಾಲ ತೀರಿಸುವುದು ಹೇಗೆ ಎಂದು ಮನನೊಂದು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮೃತ ರೈತನ ಪತ್ನಿ ಬೋರಮ್ಮ ಗೌಡರ ಪೊಲೀಸರಿಗೆ ದೂರು ನೀಡಿದ್ದಾರೆ.ರೈತನಿ ಪತ್ನಿ, ಇಬ್ಬರು ಗಂಡು, ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ.
ಪರಿಹಾರಕ್ಕೆ ಆಗ್ರಹ:
ನಿರಂತರ ಮಳೆಗೆ ತೊಗರಿ ಬೆಳೆ ಹಾನಿಗೀಡಾಗಿದ್ದು ಸಾಲ ತೀರಿಸುವುದು ಹೇಗೆಂದು ಮನನೊಂದು ರೈತ ಸಂಗಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಅವರ ಕುಟುಂಬಕ್ಕೆ ಸರ್ಕಾರದಿಂದ ಕನಿಷ್ಠ 50 ಲಕ್ಷ ಪರಿಹಾರ ಕೊಡಬೇಕು ಎಂದು ಬಿಜೆಪಿ ಜಿಲ್ಲಾ ಮುಖಂಡ ಅಶೋಕ ರಾಠೋಡ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.