ಮುದ್ದೇಬಿಹಾಳ : ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಭಾಷೆಯ ಬಗ್ಗೆ ಮಕ್ಕಳಲ್ಲಿ ಅಭಿಮಾನ ಶಿಕ್ಷಕರು ಬೆಳೆಸಬೇಕು ಎಂದು ಪಿಎಸ್‌ಐ ಸಂಜಯ ತಿಪರೆಡ್ಡಿ ಹೇಳಿದರು.
ಪಟ್ಟಣದ ಹಡಲಗೇರಿ ವ್ಯಾಪ್ತಿಯ ಬಿ.ಎ.ಎಸ್ ಇಂಟರನ್ಯಾಷನಲ್ ಶಾಲೆಯಲ್ಲಿ ಭಾನುವಾರ 70ನೇ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಏರ್ಪಡಿಸಿದ್ದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಬಿಎಎಸ್ ಶಾಲೆಯು ಆಂಗ್ಲ ಮಾಧ್ಯಮವಾಗಿದ್ದರೂ ನಮ್ಮ ಕನ್ನಡದ ಬಗ್ಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಕೆಲಸ ಹೆಮ್ಮೆ ಎನಿಸುತ್ತಿದೆ ಎಂದರು.
ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ಬಸನಗೌಡ ಬಿರಾದಾರ ಮಾತನಾಡಿ, ಆಧುನಿಕ ದಿನಗಳಲ್ಲಿ ಉನ್ನತಮಟ್ಟದ ಶಿಕ್ಷಣದ ಜೊತೆಗೆ ನಮ್ಮ ಕನ್ನಡದ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿರುವ ಬಿಎಎಸ್ ಶಾಲೆಯ ಆಡಳಿತ ಮಂಡಳಿ ಇನ್ನಿತರ ಆಂಗ್ಲ ಮಾದ್ಯಮ ಶಾಲೆಗೆ ಮಾದರಿಯಾಗಿದೆ. ಇಂತಹ ಶಾಲೆಯನ್ನು ಉನ್ನತಮಟ್ಟಕ್ಕೆ ತೆಗೆದುಕೊಂಡು ಹೋಗುವುದು ಇಲ್ಲಿನ ವಿದ್ಯಾರ್ಥಿಗಳ ಜವಾಬ್ದಾರಿಯೂ ಆಗಿದೆ ಎಂದರು.
ಸಂಸ್ಥೆಯ ಕಾರ್ಯದರ್ಶಿ ಸುಮಂಗಲಾ ಬಿರಾದಾರ, ಮುಖ್ಯ ಅತಿಥಿಯಾಗಿದ್ದ ಶಿವನಗೌಡ ಬಿರಾದಾರ, ಆಡಳಿತಾಧಿಕಾರಿ ಪ್ರಭುಗೌಡ ಬಿರಾದಾರ ಮಾತನಾಡಿದರು. ಇದೇ ವೇಳೆಯಲ್ಲಿ ಶಾಲೆಯ ವಿದ್ಯಾರ್ಥಿಗಳಲ್ಲಿ ನೀಲಿ, ಕೆಂಪು, ಹಲದಿ ಹಾಗೂ ಹಸಿರು ಬಣ್ಣಗಳ ನಾಲ್ಕು ತಂಡಗಳನ್ನು ರಚಿಸಿ ಆಯಾ ತಂಡಕ್ಕೆ ಶಾಲೆಯ ಒಂದು ಒಂದು ಜವಾಬ್ದಾರಿಯನ್ನು ಪ್ರಾಂಶುಪಾಲರಾದ ಕು.ರಿಷಿಕಾ ನಾಯಕ ಒದಗಿಸಿದರು.







