ಮುದ್ದೇಬಿಹಾಳ : ಮುಸ್ಲಿಂ ಸಮಾಜದ ಪ್ರಾತಿನಿಧಿಕ ಸಂಸ್ಥೆ ಅಂಜುಮನ್ ಇಸ್ಲಾಂ ಕಮೀಟಿಗೆ ಆಡಳಿತ ಮಂಡಳಿ ರಚನೆಗೊಂಡರೆ ಸಮಾಜದ ಶೈಕ್ಷಣಿಕ ಹಾಗೂ ಔದ್ಯೋಗಿಕ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಲು ಆದ್ಯತೆ ದೊರೆಯುತ್ತದೆ ಎಂದು ಕಾರ್ಮಿಕ ಮುಖಂಡ ಇಬ್ರಾಹಿಂ ಮುಲ್ಲಾ ಹೇಳಿದರು.
ಪಟ್ಟಣದ ಅಂಜುಮನ್ ಇಸ್ಲಾಂ ಕಮೀಟಿ ಕಚೇರಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಹರನಾಳ ಪಿಕೆಪಿಎಸ್ ಅಧ್ಯಕ್ಷ ಕಾಶೀಂಪಟೇಲ್ ಮೂಕಿಹಾಳ ಹಾಗೂ ಅಂಜುಮನ್ ಸಂಸ್ಥೆಯ ಮತದಾರ ಸದಸ್ಯರ ದಾಖಲಾತಿ ಅಧಿಕಾರಿಯಾಗಿ ನೇಮಕವಾದ ಹುಸೇನ ನಾಯಕೋಡಿ ಅವರ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಹಳ ದಿನಗಳವರೆಗೆ ನನೆಗುದಿಗೆ ಬಿದ್ದಿದ್ದ ಅಂಜುಮನ್ ಇಸ್ಲಾಂ ಕಮಿಟಿಗೆ ಸದಸ್ಯರ ದಾಖಲಾತಿಯ ಅಧಿಕಾರಿಯನ್ನು ವಕ್ಭ್ ಬೋರ್ಡ್ ನೇಮಿಸಿದ್ದು ಸ್ವಾಗತಾರ್ಹ ಕಾರ್ಯ ಎಂದರು.
ಯುವ ಮುಖಂಡ ಅಲ್ಲಾಭಕ್ಷ ದೇಸಾಯಿ(ಲಾರಾ) ಮಾತನಾಡಿ, ಇಸ್ಲಾಂ ಸಮಾಜ ಬಾಂಧವರು ಒಗ್ಗೂಡಿ ಸಮಾಜದ ಸರ್ವತೋಮುಖ ಬೆಳವಣಿಗೆಗೆ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಬೇಕು ಎಂದರು. ಮುಸ್ಲಿಂ ಸಮಾಜದ ಪ್ರಮುಖರಾದ ಅಸ್ಲಾಂ ಕಿತ್ತೂರ, ಹೈದರ್ ನಾಯ್ಕೋಡಿ, ಸಾಹೇಬಲಾಲ ದೇಸಾಯಿ, ದಾವಲ್ ಗೊಳಸಂಗಿ, ಬಬ್ಲು ಹುನಚಗಿ,ಅಬ್ದುಲ್‌ರಹಿಮಾನ್ ದಫೇದಾರ ಇದ್ದರು







