ಮುದ್ದೇಬಿಹಾಳ : ಜಲಾನಯನ ಇಲಾಖೆ ಹಾಗೂ ಕೃಷಿ ಇಲಾಖೆ ಸಹಯೋಗದಲ್ಲಿ ನಿರ್ಮಿಸಲಾಗುವ ಕೃಷಿ ಹೊಂಡ,ಜಿನುಗು ಕೆರೆ,ನಾಲಾ ಬದು,ತಡೆ ಅಣೆಗಳಿಂದ ತಾಲ್ಲೂಕಿನ ಕವಡಿಮಟ್ಟಿ ಹಾಗೂ ಕುಂಟೋಜಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ 2800 ಹೆಕ್ಟೇರ್ ಜಮೀನು ಅಭಿವೃದ್ಧಿಗೆ ಆದ್ಯತೆ ದೊರೆಯಲಿದೆ ಎಂದು ಶಾಸಕ ಸಿ.ಎಸ್.ನಾಡಗೌಡ ಹೇಳಿದರು.
ತಾಲ್ಲೂಕಿನ ಕವಡಿಮಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜಲಾನಯನ ಉತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೃಷಿಯಲ್ಲಿ ಸಂಪ್ರದಾಯ ಪದ್ಧತಿಗಿಂತ ಆಧುನಿಕ ಕೃಷಿ ಜ್ಞಾನ ಬಳಸಿಕೊಳ್ಳಬೇಕು.ವಿಶೇಷವಾಗಿ ಕುರಿ ಸಾಕಾಣಿಕೆಗೆ ಸರ್ಕಾರದ ಸಹಾಯಧನ ಪಡೆದುಕೊಂಡು ಲಾಭ ಮಾಡಿಕೊಳ್ಳಬಹುದಾಗಿದೆ.ಒಕ್ಕಲುತನದಂತಹ ಪವಿತ್ರ ವೃತ್ತಿ ಮತ್ತೊಂದಿಲ್ಲ ಎಂದು ಹೇಳಿದರು.
ಕೃಷಿಕರನ್ನು ವಂಚಿಸುವ ದೊಡ್ಡ ಹುನ್ನಾರ ನಡೆದಿದೆ.ಮೆಕ್ಕೆಜೋಳ,ತೊಗರಿ ಬೆಂಬಲ ಬೆಲೆಯಲ್ಲಿ ಖರೀದಿಸುವಂತೆ ಆದೇಶಿಸಬೇಕಿರುವುದು ಕೇಂದ್ರ ಸರ್ಕಾರ.ರಾಜ್ಯ ಸರ್ಕಾರ ತನ್ನ ಪಾಲನ್ನು ಕೊಡಲು ಸಿದ್ಧವಿದ್ದರೂ ಕೇಂದ್ರ ಸರ್ಕಾರ ನಿರ್ದೇಶನ ನೀಡುವವರೆಗೂ ರಾಜ್ಯ ಸರ್ಕಾರ ಖರೀದಿ ಆರಂಭಿಸಲು ಸಾಧ್ಯವಿಲ್ಲ.ದೊಡ್ಡ ಮಟ್ಟದಲ್ಲಿ ಆಹಾರ ಧಾನ್ಯ ಖರೀದಿಸಿದಾಗ ಅದನ್ನು ಶೇಖರಿಸುವುದು,ಮರು ಬಳಕೆಗೆ ಕ್ರಮ ಕೈಗೊಳ್ಳುವುದು ಮಾಡುತ್ತದೆ.ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹೊಂದಾಣಿಕೆಯಿAದ ಸಾಗಿದರೆ ಮಾತ್ರ ದೇಶದ ಪ್ರಗತಿ ಸಾಧ್ಯವಾಗುತ್ತದೆ ಎಂದರು.
ಉಪನ್ಯಾಸ ನೀಡಿದ ಕೃಷಿ ಇಲಾಖೆ ನಿವೃತ್ತ ಅಧಿಕಾರಿ ಎ.ಎಮ್.ಸಾವಳಗಿ ಮಾತನಾಡಿ, ನೀರಾವರಿ ಪದ್ಧತಿಯಲ್ಲಿ ಅನುಸರಿಸಬೇಕಾದ ಕ್ರಮಗಳನ್ನು ರೈತರಿಗೆ ಅರಿವು ಮೂಡಿಸುವ ಕೆಲಸ ಕೃಷಿ ಇಲಾಖೆ ಮಾಡುತ್ತಿದೆ.ಸಮುದಾಯಗಳು ಜವಾಬ್ದಾರಿ ಅರಿತುಕೊಂಡು ಅಭಿವೃದ್ಧಿ ಸಾಧಿಸಬೇಕು ಎಂದರು.
ಬಿಇಒ ಬಿ.ಎಸ್.ಸಾವಳಗಿ ಮಾತನಾಡಿದರು.
ಗ್ರಾಪಂ ಅಧ್ಯಕ್ಷೆ ಶಕುಂತಲಾ ಹಂಡರಗಲ್ ಅಧ್ಯಕ್ಷತೆ ವಹಿಸಿದ್ದರು.ಉಪ ಕೃಷಿ ನಿರ್ದೇಶಕ-1 ಶರಣಗೌಡ ಆರ್., ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ಆರ್.ಟಿ.ಹಿರೇಮಠ, ಎಸ್‌ಡಿಎಂಸಿ ಅಧ್ಯಕ್ಷ ಬಸವರಾಜ ಪಾಟೀಲ , ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಡಿ.ಭಾವಿಕಟ್ಟಿ, ಕೃಷಿ ಅಧಿಕಾರಿಗಳಾದ ಅರವಿಂದ ಹೂಗಾರ,ಸಂಗನಗೌಡ ಪಾಟೀಲ, ಸೋಮನಗೌಡ ಬಿರಾದಾರ,ರಾಜೇಶ್ವರಿ ನಾಡಗೌಡ ಇದ್ದರು.
ಉತ್ಸವದಲ್ಲಿ ಕಿರು ಪುಸ್ತಕ ಬಿಡುಗಡೆ, ಗ್ರಾಮ್ಸ ಸಂಸ್ಥೆಯಿAದ ಬೀದಿ ನಾಟಕ ಪ್ರದರ್ಶನ,ಫಲಾನುಭವಿಗಳಿಗೆ ಕೃಷಿ ಪರಿಕರಗಳ ವಿತರಣೆ, ಸಸಿ ನೆಡುವ ಕಾರ್ಯಕ್ರಮ ಹಾಗೂ ಶಾಲೆಗೆ ಪಿಎಂಕೆಎಸ್ ಡಬ್ಲೂö್ಯಡಿಸಿ 2.0 ಸನ್ 2025-26 ಯೋಜನೆಯಡಿ 92 ಬೆಂಚ್‌ಗಳನ್ನು ವಿತರಿಸಲಾಯಿತು.ಅಲ್ಲದೇ ರಂಗೋಲಿ,ಚಿತ್ರಕಲೆ ಹಾಗೂ ವಿಜ್ಞಾನ ವಸ್ತುಪ್ರದರ್ಶನದಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ,ಮಣ್ಣು ಪ್ರಮಾಣಪತ್ರಗಳನ್ನು ವಿತರಿಸಲಾಯಿತು.ಸಂಗಮೇಶ ಶಿವಣಗಿ ಪ್ರಾರ್ಥನಾ ಗೀತೆ ಹಾಡಿದರು.ಟಿ.ಡಿ.ಲಮಾಣಿ ವೀರೇಶ ಆಂದೋನಿ ನಿರೂಪಿಸಿದರು.




