ಮುದ್ದೇಬಿಹಾಳ : ಆಕಸ್ಮಿಕವಾಗಿ ವಿದ್ಯುತ್ ತಗುಲಿ ವ್ಯಕ್ತಿಯೊಬ್ಬ ವಿದ್ಯುತ್ ಕಂಬದಲ್ಲಿಯೇ ಮೃತಪಟ್ಟಿರುವ ಘಟನೆ ತಾಲ್ಲೂಕಿನ ಹುಲ್ಲೂರ ಗ್ರಾಮದ ಕಾಲುವೆ ಪಕ್ಕದಲ್ಲಿರುವ ಬಸವೇಶ್ವರ ಗುಡಿಯ ಹತ್ತಿರ ಇರುವ ವಿದ್ಯುತ್ ಕಂಬದಲ್ಲಿ ಗುರುವಾರದಂದು ಸಂಜೆ ನಡೆದಿದೆ.
ಈ ಕುರಿತು ಮೃತನ ಪತ್ನಿ ರೇಣುಕಾ ಚಲವಾದಿ ಪೊಲೀಸರಿಗೆ ದೂರು (ಕಲಂ: 194 BNSS) ನೀಡಿದ್ದು ‘ನಮ್ಮೂರಲ್ಲಿ ಸಣ್ಣ ಪುಟ್ಟ ಎಲೆಕ್ಟಿಕಲ್ ಕೆಲಸಗಳನ್ನು ಮಾಡಿಕೊಂಡಿದ್ದ ನನ್ನ ಪತಿ ಗಣಪತಿ ಚಲವಾದಿ ಡಿ.18 ರಂದು ಸಾಯಂಕಾಲ 06-15 ಗಂಟೆ ಸುಮಾರಿಗೆ ನಮ್ಮೂರ ಕೆನಾಲ್ ಬಾಜು ಬಸವೇಶ್ವರ ಗುಡಿಯ ಹತ್ತಿರ ಇರುವ ಕರೆಂಟ್ ಕಂಬದ ಮೇಲೆ ಏನೋ ಕೆಲಸ ಮಾಡಲು ಹತ್ತಿದಾಗ ಆಕಸ್ಮಿಕವಾಗಿ ಕರಂಟ್ ತಗುಲಿ ಕರೆಂಟ್ ಶಾಕ ಹೊಡೆದು ತೀರಿಕೊಂಡಿರುತ್ತಾನೆ. ಹೊರತು ನನ್ನ ಗಂಡನ ಮರಣದಲ್ಲಿ ನನ್ನದಾಗಲಿ, ನಮ್ಮ ಮನೆಯವರದಾಗಲಿ ಯಾರ ಮೇಲೆಯೂ ಯಾವುದೇ ರೀತಿಯ ಸಂಶಯ ಇರುವುದಿಲ್ಲ’ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಸಿಪಿಐ ಮೊಹ್ಮದ ಫಸಿವುದ್ದೀನ,ಪಿಎಸ್‌ಐ ಸಂಜಯ ತಿಪರೆಡ್ಡಿ, ಹೆಸ್ಕಾಂ ಎಇಇ ಆರ್.ಎನ್.ಹಾದಿಮನಿ,ದಲಿತಪರ ಸಂಘಟನೆ ಮುಖಂಡರು ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ.







