ಮುದ್ದೇಬಿಹಾಳ : ಸಮಾಜದಲ್ಲಿ ಪತ್ರಕರ್ತರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಾ ಸಮಾಜದ ಮುಂದೆ ಸತ್ಯವನ್ನು ತಲುಪಿಸುವ ಜವಾಬ್ದಾರಿಯುತ ಕಾರ್ಯನಿರ್ವಹಿಸುತ್ತಾರೆ.ಸಮಾಜದ ಒಳಿತಿಗಾಗಿ ಮಾಧ್ಯಮಗಳ ಜವಾಬ್ದಾರಿ ಹೆಚ್ಚಿದ್ದು, ಸತ್ಯನಿಷ್ಠೆ ಮತ್ತು ಮೌಲ್ಯಾಧಾರಿತ ಪತ್ರಿಕೋದ್ಯಮ ಇಂದಿನ ಅಗತ್ಯ ಎಂದು ಜಂಗಮ ಸಮಾಜದ ತಾಲ್ಲೂಕು ಅಧ್ಯಕ್ಷ ದಾನಯ್ಯಸ್ವಾಮಿ ಹಿರೇಮಠ ಹೇಳಿದರು.
ಪಟ್ಟಣದ ಶ್ರೀ ಖಾಸ್ಘತೇಶ್ವರ ಮಠದಲ್ಲಿ ಸೋಮವಾರ ಸಂಜೆ ಇಂಗಳೇಶ್ವರದ ಲಿ, ಮುನಿ ಪ್ರ, ಚನ್ನಬಸವ ಮಾಹಾಸ್ವಾಮಿಗಳ ನುಡಿಮನ ಹಾಗೂ ಪ್ರಜಾನಾಡು ಡಿಜಿಟಲ್ ಸುದ್ದಿ ವಾಹಿನಿಯ ದಿನದರ್ಶಿಕೆ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.
ಸಾಹಿತಿ ಎಚ್.ಆರ್. ಬಾಗವಾನ ಮಾತನಾಡಿ, ಇಂಗಳೇಶ್ವರ ಶ್ರೀಗಳ ನುಡಿಮನ ಚಿಂತನೆಗಳು ಸಮಾಜಕ್ಕೆ ದಾರಿದೀಪವಾಗಿದ್ದು, ದಿನದರ್ಶಿಕೆಯಂತಹ ಪ್ರಕಟಣೆಗಳು ಸಾಂಸ್ಕೃತಿಕ ಮತ್ತು ಸಾಮಾಜಿಕ ಮೌಲ್ಯಗಳನ್ನು ಮುಂದಿನ ತಲೆಮಾರಿಗೆ ತಲುಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದು ಹೇಳಿದರು.
ಸರ್ಕಾರಿ ಪಪೂ ಕಾಲೇಜಿನ ಉಪನ್ಯಾಸಕ ಐ.ಬಿ. ಹಿರೇಮಠ ಮಾತನಾಡಿ, ಡಿಜಿಟಲ್ ಪತ್ರಿಕೋದ್ಯಮ ವೇಗದ ಜೊತೆಗೆ ಜವಾಬ್ದಾರಿಯನ್ನೂ ಹೊತ್ತುಕೊಳ್ಳಬೇಕಿದೆ ಎಂದರು. ಸಾಹಿತಿ ಶಿವಪುತ್ರ ಅಜಮನಿ ಮಾತನಾಡಿ, ಸಾಹಿತ್ಯ, ಸಂಸ್ಕೃತಿ ಮತ್ತು ಮಾಧ್ಯಮಗಳ ಸಮನ್ವಯದಿಂದ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ಸಾಧ್ಯ ಎಂದು ಅಭಿಪ್ರಾಯಪಟ್ಟರು.
ದಿವ್ಯ ಸಾನಿಧ್ಯವನ್ನು ಖಾಸ್ಗತೇಶ್ವರ ಮಠದ ನೀಲಮ್ಮ ಎಸ್. ವಿರಕ್ತಮಠ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪುರಸಭೆ ಮಾಜಿ ಉಪಾಧ್ಯಕ್ಷೆ ಪ್ರೀತಿ ಎಸ್. ದೇಗಿನಾಳ,ಅಪ್ಪು ದೇಗಿನಾಳ, ಸಮಾಜ ಸೇವಕ ಅಶೋಕ ನಾಡಗೌಡ ಇದ್ದರು.
ಮುಖಂಡ ಮಹಾಂತೇಶ ಬೂದಿಹಾಳಮಠ, ಪ್ರಜಾನಾಡು ಡಿಜಿಟಲ್ ವಾಹಿನಿಯ ವರದಿಗಾರ ಸಚಿನ್ ಚಲವಾದಿ , ಎಸ್.ಬಿ. ಹುಗ್ಗಿ, ಪರಶುರಾಮ ನಾಲತವಾಡ, ರಫೀಕ್ ಶಿರೋಳ, ಶ್ರೀಕಾಂತ್ ಹಿರೇಮಠ, ಕಾಶಿನಾಥ್ ಹುಗ್ಗಿ, ರಾಜುಗೌಡ ತುಂಬಗಿ, ಶರಣು ಚಲವಾದಿ, ಆನಂದ ಮುದೊರ, ದೇವರಾಜ ಹಂಗರಗಿ, ಸಂಗಮೇಶ ಚಲವಾದಿ, ಸಿದ್ದು ಪಾಟೀಲ್ ಇದ್ದರು.







